ಹಾಯ್ ಗೆಳೆಯರೇ, ನಾನಿವತ್ತು ಹೇಳಲು ಹೊರಟಿರುವ ಕಥೆಯಿಂದ ನಿಮಗೆ ಖಂಡಿತ ಮೊಟಿವೇಷನ ಸಿಗುತ್ತದೆ. ಜೊತೆಗೆ ಕಣ್ಣೀರು ಕೂಡ ಬರುತ್ತದೆ. ನೀವು ನಿಮ್ಮ ಜೀವನದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಹೆದರಿ ಸಾಯುವ ಯೋಚನೆ ಮಾಡುತ್ತಿದ್ದರೆ ನೀವೀ ಕಥೆಯನ್ನು ಓದಲೇಬೇಕು. ನಿಮಗೆ ತಾವು ಬೀದಿಯಲ್ಲಿ ಬಿದ್ದರೂ ಭಿಕ್ಷೆ ಬೇಡಿ ಸಾವಿರಾರು ಅನಾಥ ಮಕ್ಕಳನ್ನು ಸಾಕಿದ ಸಿಂಧೂತಾಯಿಯವರಿಗಿಂತ ಬೇರೆ ಇನ್ಸ್ಪಿರೇಷನ ಬೇಕಿಲ್ಲ. Yes, ಬನ್ನಿ ಗೆಳೆಯರೇ, ಇವತ್ತಿನ ಅಂಕಣದಲ್ಲಿ ಅನಾಥರ ತಾಯಿ, ಮಾಯಿ, ಸಿಂಧೂತಾಯಿ ಸಪಕಾಲರವರ ಜೀವನಕಥೆಯನ್ನು ತಿಳಿದುಕೊಳ್ಳೋಣ.
ಸಿಂಧುತಾಯಿಯವರ ಜನನ 1948ರ ನವೆಂಬರ 14ರಂದು ಮಹಾರಾಷ್ಟ್ರದ ವಾದ್ರಾ ಜಿಲ್ಲೆಯ ಪಿಂಪ್ರಿ ಮೆಘೇ ಎಂಬಲ್ಲಿ ಒಂದು ದನ ಮೇಯಿಸುವ ಕುಂಟುಂಬದಲ್ಲಾಯಿತು. ದನ ಮೇಯಿಸುವುದು ಇವರ ಕುಟುಂಬದ ಮುಖ್ಯ ಕೆಲಸವಾಗಿತ್ತು. ಅವರು ಅವರ ತಂದೆತಾಯಿಗಳಿಗೆ ಬೇಡದ ಮಗುವಾಗಿದ್ದರು, ಹೆಣ್ಣು ಮಗು ಹುಣ್ಣೆಂಬ ಮನಸ್ಥಿತಿ ಅವರ ತಂದೆತಾಯಿಗಳಲ್ಲಿತ್ತು. ಆದ್ದರಿಂದ ಅವರನ್ನು ಚಿಂದಿ ಎಂದು ಕರೆಯುತ್ತಿದ್ದರು. ಅವರಿಗೆ ಒಂದೊಳ್ಳೆ ಹೆಸರನ್ನು ಸಹ ಇಟ್ಟಿರಲಿಲ್ಲ. ಚಿಂದಿ ಎಂದರೆ ಮರಾಠಿಯಲ್ಲಿ ಹರಿದ ಬಟ್ಟೆ ಎಂದರ್ಥ. ಸಿಂಧೂತಾಯಿಗೆ ಬಾಲ್ಯದಲ್ಲಿ ಕಲಿಯುವ ಹಂಬಲ ಬಹಳಷ್ಟಿತ್ತು. ಅವರು ಓದಿನಲ್ಲಿ ಚುರುಕಾಗಿದ್ದರು. ಅವರ ತಂದೆ ಅಭಿಮಾನಜೀ ಸಾಥೆಯವರಿಗೆ ಅವರನ್ನು ಓದಿಸುವ ಇಚ್ಛೆಯು ಇತ್ತು. ಆದರೆ ಅವರ ತಾಯಿಗೆ ಅವರನ್ನು ಓದಿಸುವ ಮನಸ್ಸಿರಲಿಲ್ಲ. ಅವರ ತಂದೆ ದನ ಕಾಯುವ ನೆಪದಲ್ಲಿ ಅವರನ್ನು ಕದ್ದುಮುಚ್ಚಿ ಶಾಲೆಗೆ ಕಳುಹಿಸುತ್ತಿದ್ದರು. ಕಡು ಬಡತನದಿಂದಾಗಿ ಅವರಿಗೆ ಬರೆಯಲು ಸ್ಲೇಟ ಸಿಗುತ್ತಿರಲಿಲ್ಲ. ಅವರು ಮರದ ಎಲೆಗಳ ಮೇಲೆ ಬರೆಯುತ್ತಿದ್ದರು. ಅವರು ನಾಲ್ಕನೇ ತರಗತಿವರೆಗೆ ಓದಿದ್ದರು. ಅಷ್ಟರಲ್ಲಿ ಬಡತನ ಹಾಗೂ ಸಮಾಜದ ಕಟ್ಟುಪಾಡುಗಳಿಂದಾಗಿ, 9ನೇ ವಯಸ್ಸಿನಲ್ಲಿ ಅವರ ಮದುವೆ 30 ವರ್ಷದ ಅಶಿಕ್ಷಿತ ದನಕಾಯುವ ವ್ಯಕ್ತಿ ಶ್ರೀಹರಿ ಸಪಕಾಲನೊಂದಿಗೆ ಆಯಿತು. ಅವರ ಶಿಕ್ಷಣದ ಕನಸು ಅವರ ಬಾಲ್ಯವಿವಾಹದಲ್ಲಿ ಕಮರಿ ಹೋಯಿತು.
ಮದುವೆಯಾಗಿ ಗಂಡನ ಮನೆ ಸೇರಿದ ನಂತರ ಸಿಂಧೂತಾಯಿಯವರಿಗೆ ಮುಳ್ಳಿನ ಜೀವನವನ್ನು ಎದುರಿಸಬೇಕಾಯಿತು. ಅವಿದ್ಯಾವಂತ ಒರಟು ಗಂಡ ಹಾಗೂ ಕಾರಣವಿಲ್ಲದೆ ಕಾಟ ಕೊಡುವ ಅತ್ತೆಯ ಕಿರುಕುಳಗಳನ್ನು ಸಹಿಸಬೇಕಾಯಿತು. ಆದರೂ ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಸಿಂಧೂತಾಯಿ ಸೇರಿ ಅಲ್ಲಿನ ಹೆಣ್ಣು ಮಕ್ಕಳ ಗಂಡಂದಿರೆಲ್ಲ ದನ ಮೇಯಿಸುವ ಕೆಲಸ ಮಾಡುತ್ತಿದ್ದರು. ಇವರು ದಿನಾ ದನಗಳ ಸಗಣಿಯನ್ನು ಆಯ್ದು ಅದನ್ನು ಸಂಗ್ರಹಿಸುತ್ತಿದ್ದರು. ನಂತರ ಅದನ್ನು ಅರಣ್ಯ ಇಲಾಖೆಯವರು ಬಂದು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಅವರ ಈ ಸಗಣಿ ಎತ್ತುವ ಕೆಲಸಕ್ಕೆ ಅವರಿಗೆ ಯಾವುದೇ ಸಂಬಳ ಸಿಗುತ್ತಿರಲಿಲ್ಲ. ಸಂಬಳ ಕೇಳಿದರೆ ಅಲ್ಲಿನ ಜಮೀನ್ದಾರನಿಂದ ಬರೀ ಬೈಗುಳಗಳು ಸಿಗುತ್ತಿದ್ದವು. ಇದರಿಂದ ಸಿಡಿದೆದ್ದ ಸಿಂಧೂತಾಯಿ ಅರಣ್ಯ ಇಲಾಖೆ ಹಾಗೂ ಜಮೀನ್ದಾರರಿಂದ ಅಲ್ಲಿನ ದನಗಾಯಿ ಕುಟುಂಬಗಳಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು. ಅವರ ಹೋರಾಟದಿಂದಾಗಿ ಅಲ್ಲಿನ ಜನರಿಗೆ ನ್ಯಾಯ ಸಿಕ್ಕಿತು. ಅವರಿಗೆ ಅವರ ಕೆಲಸಕ್ಕಾಗಿ ಸಂಬಳ ಸಿಕ್ಕಿತು. ಆದರೆ ವೈಯಕ್ತಿಕವಾಗಿ ಸಿಂಧೂತಾಯಿಯವರಿಗೆ ನಷ್ಟವಾಯಿತು. ಆ ಸಮಯದಲ್ಲಿ 20 ವರ್ಷದ ಸಿಂಧೂತಾಯಿಗೆ 3 ಮಕ್ಕಳಿದ್ದರು. 4ನೇ ಮಗು ಅವರ ಗರ್ಭದಲ್ಲಿತ್ತು. ಅವರು ಗರ್ಭವತಿಯಾಗಿದ್ದರು. ಆಗ ಅವರ ಮೇಲೆ ಕತ್ತಿ ಮಸೆಯುತ್ತಿದ್ದ ಜಮೀನ್ದಾರ ಅವರ ಹೊಟ್ಟೆಯಲ್ಲಿರುವ ಮಗುವಿನ ತಂದೆ ನಾನೆಂದು ಸುಳ್ಳು ಸುದ್ದಿ ಹಬ್ಬಿಸಿ ಅವರ ವ್ಯಕ್ತಿತ್ವಕ್ಕೆ ಕಳಂಕ ಅಂಟಿಸಿದನು. ಈ ಸುಳ್ಳು ಸುದ್ದಿಯನ್ನು ನಿಜವೆಂದು ನಂಬಿ ಅವರ ಗಂಡ ಕೆರಳಿ ತುಂಬು ಗರ್ಭಿಣಿ ಎನ್ನುವುದನ್ನು ನೋಡದೇ ಅವರನ್ನು ಸಾಯೋವಂತೆ ಹೊಡೆದನು. ಅವರನ್ನು ಮನೆಯಿಂದ ಆಚೆ ತಳ್ಳಿದನು. ಅವರು ಪ್ರಜ್ಞೆ ತಪ್ಪಿ ದನದ ಕೊಟ್ಟಿಗೆಯಲ್ಲಿ ಬಿದ್ದರು. ಅಲ್ಲಿಯೇ ಅವರಿಗೆ ಹೆರಿಗೆಯಾಯಿತು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೃದಯವನ್ನು ಕಲ್ಲು ಮಾಡಿಕೊಂಡು ಮಗುವಿನ ಜನ್ಮನಾಳವನ್ನು ಕಲ್ಲಿನಿಂದ 16 ಏಟುಗಳನ್ನು ಹೊಡೆದು ಕತ್ತರಿಸಿದರು.
ಗಂಡನ ಮನೆಯ ಬಾಗಿಲು ಮುಚ್ಚಿದ ನಂತರ ಸಿಂಧೂತಾಯಿಯವರು ತಮ್ಮ ಮಗಳು ಮಮತಾಳೊಂದಿಗೆ ತವರು ಮನೆಗೆ ಹೋದರು. ಆದರೆ ಅಲ್ಲಿಯೂ ಅವರಿಗೆ ಆಶ್ರಯ ಸಿಗಲಿಲ್ಲ. ಇಂಥ ಸ್ಥಿತಿಯಲ್ಲಿ ಅವರಿಗೆ ಸಾಯುವ ಯೋಚನೆ ಬಂತು. ಅದಕ್ಕಾಗಿ ಅವರು ಸೂಸೈಡ್ ಮಾಡಿಕೊಂಡು ಸಾಯಲು ರೈಲ್ವೆ ಹಳಿಯ ಮೇಲೆ ನಿಂತರು. ವೇಗದಿಂದ ರೈಲು ಬರುವುದು ಕಾಣಿಸುತ್ತಿತ್ತು. ರೈಲ್ವೆ ಹಳಿ ನಡುಗುತ್ತಿತ್ತು. ಆಗ ತಮ್ಮ ಹಸಿಗೂಸು ಮಮತಾಳ ಮುಖವನ್ನೊಮ್ಮೆ ನೋಡಿದಾಗ ಅವರ ಮನಸ್ಸು ಬದಲಾಯಿತು. ಈ ರೀತಿ ಮಗುವನ್ನು ಸಾಯಿಸುವುದಿದ್ದರೆ ಜನ್ಮವೇಕೆ ನೀಡಬೇಕಿತ್ತು? ಎಂಬ ಪ್ರಶ್ನೆ ಅವರ ಸಾಯುವ ನಿರ್ಧಾರವನ್ನು ಬದಲಿಸಿತು. ಅವರು ಬದುಕುವ ಗಟ್ಟಿ ಮನಸ್ಸು ಮಾಡಿ ಮುನ್ನಡೆದರು. ಈ ಸಮಯದಲ್ಲಿ ಅವರು ಹೊಟ್ಟೆಪಾಡಿಗಾಗಿ ಬೀದಿಗಳಲ್ಲಿ, ರೈಲ್ವೆ ಸ್ಟೇಷನಗಳಲ್ಲಿ, ಬಸಸ್ಟ್ಯಾಂಡಗಳಲ್ಲಿ ಭಿಕ್ಷೆ ಬೇಡಿದರು. ತಾವು ಭಿಕ್ಷೆ ಬೇಡಿ ಪಡೆದಿದ್ದ ಆಹಾರವನ್ನು ಭಿಕ್ಷೆ ಸಿಗದ ಬೇರೆ ಭಿಕ್ಷುಕರೊಂದಿಗೆ ಹಂಚಿಕೊಂಡು ತಿಂದರು. ಇರಲು ಮನೆಯಿಲ್ಲದಕ್ಕಾಗಿ ಅವರು ರೈಲ್ವೆ ಸ್ಟೇಷನನಲ್ಲಿ ಮಲಗುತ್ತಿದ್ದರು. ಅವರು ಹಸಿವಾದಾಗ ಅನ್ನ ಕೊಟ್ಟರೆಂಬ ಕಾರಣಕ್ಕೆ ಬೇರೆ ಭಿಕ್ಷುಕರು ಅವರ ಪಕ್ಕ ಕುಳಿತು ಅವರಿಗೆ ರಕ್ಷಣೆ ಹಾಗೂ ಧೈರ್ಯವನ್ನು ಕೊಡುತ್ತಿದ್ದರು. ಆದರೆ ಸಿಂಧೂತಾಯಿಯವರಿಗೆ ನನ್ನಂಥ ಹರೆಯದ ಹೆಣ್ಣು ಮಗಳಿಗೆ ರೈಲ್ವೆ ಸ್ಟೇಷನ ಸುರಕ್ಷಿತ ಜಾಗವಲ್ಲ ಎಂಬುದು ಗೊತ್ತಿತ್ತು. ಅದಕ್ಕಾಗಿ ಅವರು ಎಲ್ಲ ಭಿಕ್ಷುಕರು ಮಲಗಿದ ನಂತರ ಸ್ಮಶಾನಕ್ಕೆ ಹೋಗುತ್ತಿದ್ದರು. ಸಮಾಜದ ಕೆಟ್ಟ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸ್ಮಶಾನದಲ್ಲಿ ಮಲಗುತ್ತಿದ್ದರು. ಏಕೆಂದರೆ ದೆವ್ವ ಭೂತಗಳಿಗೆ ಹೆದರಿ ಜೀವಂತವಾಗಿರುವವರು ಯಾರು ರಾತ್ರಿ ಸ್ಮಶಾನದಲ್ಲಿ ಪ್ರವೇಶಿಸುತ್ತಿರಲಿಲ್ಲ.
ಒಂದ್ಸಲ ಸಿಂಧೂತಾಯಿಯವರಿಗೆ ಭಿಕ್ಷೆ ಸಿಕ್ಕಿರಲಿಲ್ಲ. ಹೊಟ್ಟೆ ಹಸಿವು ಅಸಹನೀಯವಾಗಿತ್ತು. ಅವರ ಮಗಳು ಹಸಿವಿನಿಂದಾಗಿ ಅಳುತ್ತಿದ್ದಳು. ಆ ಸಮಯದಲ್ಲಿ ಒಂದು ಶವಯಾತ್ರೆ ಸ್ಮಶಾನದ ಕಡೆಗೆ ಹೋಗುತ್ತಿರುವುದು ಅವರ ಕಣ್ಣಿಗೆ ಕಾಣಿಸಿತು. ಅವರು ಅದನ್ನು ಹಿಂಬಾಲಿಸಿದರು. ಆ ಶವದ ಸಂಬಂಧಿಕರು ಶಾಸ್ತ್ರದ ಅನುಸಾರ ಮಾಡಬೇಕಾದ ವಿಧಿ ವಿಧಾನಗಳನ್ನೆಲ್ಲ ಮಾಡಿ ಒಂದುವರೆ ರೂಪಾಯಿ ಹಾಗೂ ಒಂದು ಹಿಡಿ ಹಿಟ್ಟನ್ನು ಇಟ್ಟು ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಹೊರಟು ಹೋದರು. ಅವರು ಹೋದ ನಂತರ ಸಿಂಧೂತಾಯಿ ಅಲ್ಲಿಗೆ ಹೋದರು. ಚಿತೆಯ ಮೇಲೆ ಶವ ಸುಡುತ್ತಿತ್ತು. ಮೌನವಾಗಿದ್ದ ಸ್ಮಶಾನದಲ್ಲಿ ನಾಯಿಗಳು, ಕಾಗೆಗಳು ಕೀರುಚುತ್ತಿದ್ದವು. ಅಂಥದ್ದರಲ್ಲಿ ಸಿಂಧೂತಾಯಿ ಅಲ್ಲಿ ಬಿದ್ದಿದ್ದ ಮುರಿದ ಮಡಿಕೆಯಲ್ಲಿ ಅಲ್ಲಿ ಇಟ್ಟು ಹೋಗಿದ್ದ ಹಿಟ್ಟನ್ನು ಕಲಿಸಿ ಸುಡುತ್ತಿರುವ ಚಿತೆಯ ಮೇಲೆ ರೊಟ್ಟಿಯನ್ನು ಬೇಯಿಸಿ ತಿಂದರು. ಇದನ್ನು ಓದಿ ನಿಮ್ಮ ಮೈ ನಡುಗುತ್ತಿರಬೇಕಲ್ಲ? ಆ ದಿನ ಅವರು ಬಹಳಷ್ಟು ಹೆದರಿದ್ದರು. ಆದರೆ ಅವರು ಅವತ್ತು ಮಾನಸಿಕವಾಗಿ ಬಲಿಷ್ಟರಾದರು. ರಾತ್ರಿ ಸ್ಮಶಾನದಲ್ಲಿ ಬರೀ ಮಲಗುವುದಷ್ಟೇ ಅಲ್ಲ, ಸುಡುತ್ತಿರುವ ಚಿತೆಯ ಮೇಲೆ ರೊಟ್ಟಿ ಬೇಯಿಸಿಕೊಂಡು ತಿನ್ನುತ್ತಾರೆಂದರೆ ನೀವೇ ಊಹಿಸಿ ಅವರಲ್ಲಿ ಧೈರ್ಯ ಎಷ್ಟಿತ್ತು ಅಂತಾ. ಹೊಟ್ಟೆ ಹಸಿವು ಎಂಥವರನ್ನು ಧೈರ್ಯಶಾಲಿಗಳನ್ನಾಗಿ ಮಾಡುತ್ತೆ ಅಲ್ವಾ? ಜನ ಅವರನ್ನು ರಾತ್ರಿ ಸ್ಮಶಾನದಲ್ಲಿ ನೋಡಿ ದೆವ್ವವೆಂದು ಹೆದರುತ್ತಿದ್ದರು.
ಸುಡುತ್ತಿರುವ ಚಿತೆಯ ಮೇಲೆ ರೊಟ್ಟಿ ಬೇಯಿಸಿಕೊಂಡು ತಿಂದ ನಂತರ ಸಿಂಧೂತಾಯಿ ಬಹಳಷ್ಟು ಧೈರ್ಯಶಾಲಿಯಾದರು. ತಮ್ಮ ಮನೆಯವರಿಟ್ಟ ಚಿಂದಿ ಎಂಬ ದರಿದ್ರ ಹೆಸರನ್ನು ಕಿತ್ತಾಕಿ ಸಿಂಧೂ ಎಂಬ ಹೊಸ ಹೆಸರನ್ನು ಇಟ್ಟುಕೊಂಡರು. ಸಿಂಧೂ ನದಿ ಅವರ ನೆಚ್ಚಿನ ನದಿಯಾಗಿತ್ತು. ಅದಕ್ಕಾಗಿ ಅವರು ತಮ್ಮ ಹೆಸರನ್ನು ಸಿಂಧೂ ಎಂದಿಟ್ಟುಕೊಂಡರು. ಮುಂದೆ ತಾವು ಹೋಗುವ ದಾರಿಯಲ್ಲಿ ಸಿಕ್ಕ ಅನಾಥ ಮಕ್ಕಳನ್ನೆಲ್ಲ ದತ್ತು ತೆಗೆದುಕೊಂಡು ಸಿಂಧೂತಾಯಿಯಾದರು. ಸಿಂಧೂತಾಯಿ ರೈಲ್ವೆ ಸ್ಟೇಷನನಲ್ಲಿ ಭಿಕ್ಷೆ ಬೇಡುತ್ತಿದ್ದ ಎಷ್ಟೋ ಅನಾಥ ಮಕ್ಕಳನ್ನು ನೋಡಿದರು. ಅವರನ್ನೆಲ್ಲ ಅವರು ದತ್ತು ತೆಗೆದುಕೊಂಡು ಭಿಕ್ಷೆ ಬೇಡಲು ಪ್ರಾರಂಭಿಸಿದರು. ಹೀಗೆಯೇ ಭಿಕ್ಷೆ ಬೇಡುತ್ತಾ ದಾರಿಯಲ್ಲಿ ಸಿಗುವ ಪ್ರತಿ ಅನಾಥ ಮಗುವಿನ ತಾಯಿಯಾದರು. ಅವರು ರೈಲ್ವೆ ಸ್ಟೇಷನಗಳಲ್ಲಿ, ರೈಲಿನಲ್ಲಿ ಹಾಡ ಹಾಡುತ್ತಿದ್ದರು. ಹಾಡ ಹಾಡಿದಾಗ ಅವರಿಗೆ ಹಾಗೂ ಅವರ ಮಕ್ಕಳಿಗೆ ಊಟ ಸಿಗುತ್ತಿತ್ತು. ತಮ್ಮ ಸ್ವಂತ ಮಗಳು ಮಮತಾ ಹಾಗೂ ದತ್ತು ಮಕ್ಕಳ ನಡುವೆ ಯಾವುದೇ ಭೇದಭಾವವಾಗಬಾರದೆಂಬ ಒಂದೇ ಕಾರಣಕ್ಕೆ, ಅವರು ಮಮತಾಳನ್ನು ಪುಣೆಯ ದಗಡು ಶೇಠ ಹಲ್ವಾಯಿ ಗಣಪತಿ ಟ್ರಸ್ಟಗೆ ತಾತ್ಕಾಲಿಕವಾಗಿ ದತ್ತು ಕೊಟ್ಟರು. ಈಗ ಅವರ ಮಗಳು ಮಮತಾ ಅವರ ಪುಣೆಯ ಆಶ್ರಮದ ಸಂಪೂರ್ಣ ಉತ್ಸುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರು MSW ತನಕ ಓದಿದ್ದಾರೆ.
ಸಿಂಧೂತಾಯಿಯವರ ಪಯಣ ಇಲ್ಲಿಗೆ ಮುಗಿಯಲ್ಲ. ಅವರು 84 ಹಳ್ಳಿಗಳ ಪುನರುಸ್ಥಾನಕ್ಕಾಗಿ ಹೋರಾಡಿದ್ದಾರೆ. ಮನೆ ಕಳೆದುಕೊಂಡ ಆದಿವಾಸಿಗಳಿಗೆ, ಬುಡಕಟ್ಟು ಜನಾಂಗದವರಿಗೆ ಸರ್ಕಾರದಿಂದ ಪುನರವಸತಿ ಕಲ್ಪಿಸಿಕೊಟ್ಟಿದ್ದಾರೆ. ಅವರು 1050ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಸಾಕಿ ಸಲುಹಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಅವರ ಕೆಲಸವನ್ನು ಮೆಚ್ಚಿ ಅವರಿಗೆ ಗೌರವ ಡಾಕ್ಟರೇಟ್, ರಾಷ್ಟ್ರಪತಿ ಪದಕ ಸೇರಿ 750ಕ್ಕಿಂತಲೂ ಅಧಿಕ ಪ್ರಶಸ್ತಿಗಳು ಬಂದಿವೆ. ಅವರು ತಮಗೆ ಬಂದ ಪ್ರಶಸ್ತಿಗಳನ್ನು ಮಾರಿ ಬಂದ ಹಣದಿಂದ ಸ್ವಂತ ಜಾಗ ಖರೀದಿಸಿ ತಮ್ಮ ಆಶ್ರಮ ನಿರ್ಮಿಸಿದ್ದಾರೆ. ಪುಣೆಯ ಹಡಸ್ಪರನಲ್ಲಿನ ಮಾಂಜರಿ ಎಂಬಲ್ಲಿ ಅವರು ನಿರ್ಮಿಸಿದ ಸನ್ಮತಿ ಬಾಲ ನಿಕೇತನ ಆಶ್ರಮವಿದೆ. ಅಲ್ಲೀಗ 300ಕ್ಕೂ ಅಧಿಕ ಮಕ್ಕಳಿದ್ದಾರೆ. ಈಗಲೂ ಅವರು ಈ ಮಕ್ಕಳನ್ನು ಸಾಕುವುದಕ್ಕಾಗಿ ಕಷ್ಟ ಪಡುತ್ತಿದ್ದಾರೆ. ಈ ಮಕ್ಕಳನ್ನು ಸಾಕುವುದಕ್ಕಾಗಿ ಜಗತ್ತಿನಾದ್ಯಂತ ಸಂಚರಿಸಿ ಮೊಟಿವೇಷನಲ್ ಸೆಮಿನಾರಗಳನ್ನು ಮಾಡುತ್ತಿದ್ದಾರೆ. ಅಲ್ಲಿ ದಾನವಾಗಿ ಸಿಕ್ಕ ಹಣದಿಂದ ಅವರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಅವರ ಮೋಟಿವೇಷನಲ್ ಸ್ಪೀಚಗಳು, ಕವನಗಳು ಲಕ್ಷಾಂತರ ಜನರಿಗೆ ಸ್ಪೂರ್ತಿ ತುಂಬಿವೆ. ಬದುಕಿನ ಮೇಲೆ ಭರವಸೆಯನ್ನು ಮೂಡಿಸಿವೆ.
ಸಿಂಧೂತಾಯಿಯವರು ಎಂಥ ಕರುಣಾಮಯಿ ಎಂಬುದಕ್ಕೆ ಒಂದು ಘಟನೆ ಹೇಳ್ತೀನಿ ಕೇಳಿ. ಒಂದಿನ 80 ವರ್ಷದ ಅವರ ಗಂಡ ಶ್ರೀಹರಿ ಸಪಕಾಲ ಅವರ ಆಶ್ರಮಕ್ಕೆ ಅಳುತ್ತಾ ಬಂದು ಕ್ಷಮೆ ಕೇಳುತ್ತಾನೆ. ಜೊತೆಗೆ ಆಶ್ರಯ ಬಯಸುತ್ತಾನೆ. ಆಗ ಸಿಂಧೂತಾಯಿ ಅವನನ್ನು ಕ್ಷಮಿಸಿ ತಮ್ಮ ದೊಡ್ಡ ಮಗನಾಗಿ ಅವನನ್ನು ಆಶ್ರಮಕ್ಕೆ ಸೇರಿಸಿಕೊಳ್ಳುತ್ತಾರೆ. ಅವರ ಮನಸ್ಸು ಎಂಥದ್ದು, ಎಷ್ಟು ನಿರ್ಮಲವಾದದ್ದು ಎಂಬುದಕ್ಕೆ ಈ ಒಂದು ಘಟನೆ ಸಾಕು. ಅವರಿಗೆ ಯಾರ ಮೇಲೆ ಕೋಪವಾಗಲಿ, ದ್ವೇಷವಾಗಲಿ ಇಲ್ಲ. ತಮ್ಮನ್ನು ಗಂಡನ ಮನೆಯವರು, ತವರು ಮನೆಯವರು ಹೊರಹಾಕದಿದ್ದರೆ ಈ ಅನಾಥ ಮಕ್ಕಳಿಗೆ ತಾಯಿ ಸಿಗುತ್ತಿರಲಿಲ್ಲ ಎಂದವರು ಖುಷಿಖುಷಿಯಾಗಿ ಹೇಳುತ್ತಾರೆ. ಅನಾಥ ಮಕ್ಕಳನ್ನು ಸಾಕುವುದು, ಅವರಿಗೆ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡುವುದು ಅವರ ಏಕೈಕ ಗುರಿಯಾಗಿದೆ. ಜನ ಸಿಂಧೂತಾಯಿಯವರನ್ನು ಮಹಾತಾಯಿ ಎನ್ನುತ್ತಾರೆ, ಅನಾಥರ ತಾಯಿ ಎನ್ನುತ್ತಾರೆ, Mother of Everyone ಅಂದರೆ ಎಲ್ಲರ ತಾಯಿ ಎನ್ನುತ್ತಾರೆ. ಆದರೆ ಅವರ ಮಕ್ಕಳು ಅವರನ್ನು ಪ್ರೀತಿಯಿಂದ ಮಾಯಿ ಎಂದು ಕರೆಯುತ್ತಾರೆ. ಸಿಂಧೂತಾಯಿ ಅನಾಥ ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನು ಮೀಸಲಿಟ್ಟಿದ್ದಾರೆ. ಅದಕ್ಕಾಗಿ ಅವರನ್ನು ನಮ್ಮ ಮಹಾರಾಷ್ಟ್ರದಲ್ಲಿ ಮಾಯಿ (ತಾಯಿ) ಎಂದು ಪೂಜಿಸುತ್ತಾರೆ.
ಸಿಂಧೂತಾಯಿಯವರು “ಮೀ ವನವಾಸಿ” (ನಾನು ವನವಾಸಿ) ಎಂಬ ಹೆಸರಿನಿಂದ ತಮ್ಮ ಆತ್ಮಕಥೆಯನ್ನು ಬರೆದಿದ್ದಾರೆ. ಸಿಂಧೂತಾಯಿಯವರ ಜೀವನದಿಂದ ಪ್ರೇರಿತಗೊಂಡು 2010ರಲ್ಲಿ “ಮೀ ಸಿಂಧೂತಾಯಿ ಸಪಕಾಲ” ಎಂಬ ಮರಾಠಿ ಸಿನಿಮಾ ಕೂಡ ತಯಾರಾಗಿದೆ.
ಸಿಂಧೂತಾಯಿಯವರಿಗೆ ಓದಲಾಗಲಿಲ್ಲ, ಆದರೆ ಅವರು ಸಾವಿರಾರು ಮಕ್ಕಳನ್ನು ಓದಿಸಿದ್ದಾರೆ. ಅವರನ್ನು ಡಾಕ್ಟರ್, ಇಂಜಿನಿಯರ್, ಬಿಜನೆಸಮ್ಯಾನಗಳನ್ನಾಗಿ ಮಾಡಿದ್ದಾರೆ. ಒಂದು ಕಾಲದಲ್ಲಿ ಅವರಿಗೆ ಊಟವಿರಲಿಲ್ಲ, ಆದರೆ ಅವರು ಸಾವಿರಾರು ಮಕ್ಕಳ ಹಸಿವನ್ನು ನೀಗಿಸಿದ್ದಾರೆ. ಗಂಡನ ಮನೆಯವರು, ತವರು ಮನೆಯವರು ಅವರನ್ನು ತಿರಸ್ಕರಿಸಿದರು, ಆದರೆ ಸಾವಿರಾರು ಅನಾಥರಿಗೆ ಅವರು ತವರಾಗಿದ್ದಾರೆ. ಒಂದು ಕಾಲದಲ್ಲಿ ಅವರಿಗೆ ಆಶ್ರಯವಿರಲಿಲ್ಲ, ಆದರೆ ಅವರು ಬೀದಿಯಲ್ಲಿ ಬಿದ್ದಿದ್ದ ಮಕ್ಕಳನ್ನೆಲ್ಲ ಎತ್ತಿಕೊಂಡು ಬಂದು ಸ್ವಂತ ಮಕ್ಕಳಂತೆ ಸಾಕಿದ್ದಾರೆ. ಅವರ ಬದುಕನ್ನು ರೂಪಿಸಿದ್ದಾರೆ. ಇದಕ್ಕಂತಾರೆ ಬದುಕುವ ಹಠ, ಇದಕ್ಕಂತಾರೆ ಧೈರ್ಯ, ಇದಕ್ಕಂತಾರೆ ಸ್ತ್ರೀ ಶಕ್ತಿ. ನಿಜಕ್ಕೂ ಅವರು ದಿ ಗ್ರೇಟ್.
ಇದಿಷ್ಟು ಸಿಂಧೂತಾಯಿಯವರ ಮಹಾನ್ ಜೀವನ ಕಥೆ. ಆದರೆ ನಿಮ್ಮೆಲ್ಲರಲ್ಲಿ ನನ್ನ ಎರಡು ಕೋರಿಕೆಗಳಿವೆ.
ಮೊದಲನೇಯದ್ದು, ಸಿಂಧೂತಾಯಿಯವರಿಗೆ ನಮ್ಮ ಕೇಂದ್ರ ಸರ್ಕಾರ ಹಲವಾರು ಪ್ರಶಸ್ತಿಗಳನ್ನು ಕೊಟ್ಟಿದೆ. ಆದರೆ ಪ್ರೋತ್ಸಾಹಧನವನ್ನು ಕೊಟ್ಟಿಲ್ಲ. ಯಾವುದೇ ಗ್ರ್ಯಾಂಟ್ ಕೊಟ್ಟಿಲ್ಲ. ಪ್ರಶಸ್ತಿಗಳಿಂದ ಹೊಟ್ಟೆ ತುಂಬಲ್ಲ ಸ್ವಾಮಿ. ನಿಮ್ಮ ಕೈಯಿಂದ ಅಂತು ದೇಶದ ಬಡತನ ಹಾಗೂ ಹಸಿವನ್ನು ಮುಗಿಸುವುದು ಆಗಲ್ಲ. ಆ್ಯಟ ಲಿಸ್ಟ ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರಿಗೆ ಸಪೋರ್ಟ್ ಆದ್ರೂ ಮಾಡಿ. ನಾನೀ ಮಾತನ್ನು ನಮ್ಮ ದೇಶದ ಎಲ್ಲ ರಾಜಕಾರಣಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಹೇಳುತ್ತಿರುವೆ.
ಎರಡನೇ ಕೋರಿಕೆ ಈ ಅಂಕಣವನ್ನು ಓದಿದ ನಿಮ್ಮೆಲ್ಲರಿಗೂ ಇದೆ. ಫೇಸ್ಬುಕಲ್ಲಿ 100 ಕೋಟಿಗೂ ಅಧಿಕ ಜನ ಇದ್ದೀರಾ, ನೀವೆಲ್ಲರೂ ಸಿಂಧೂತಾಯಿಯವರಿಗೆ ಒಂದೊಂದು ರೂಪಾಯಿ ದಾನ ಮಾಡಿದ್ರು ಸಾವಿರಾರು ಅನಾಥ ಮಕ್ಕಳ ಜೀವನ ಸೆಟ್ಲಾಗುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, (Sindhutaisapkal.org) ಸಿಂಧೂತಾಯಿಯವರ ವೆಬಸೈಟಗೆ ಹೋಗಿ ಅವರ ಬಗ್ಗೆ ತಿಳಿದುಕೊಳ್ಳಿ. ಆನಂತರ ಸಾಧ್ಯವಾದರೆ ಕೈಲಾದಷ್ಟು ಧನಸಹಾಯ ಮಾಡಿ ಅವರಿಗೆ ಪ್ರೋತ್ಸಾಹ ನೀಡಿ. ಅವರು ಬೀದಿಗೆ ಬಿದ್ದಿದ್ದರೂ ಸಹ ಬೇರೆಯವರ ಬಗ್ಗೆ ಯೋಚಿಸಿದ್ದಾರೆ, ಬೇರೆಯವರಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಆದರೆ ನೀವು ಮನೆಯಲ್ಲಿದ್ದರೂ ಬೇರೆಯವರ ಬಗ್ಗೆ ಯೋಚಿಸದಿದ್ದರೆ ನಿಮ್ಮಂಥ ಕಲ್ಲು ಹೃದಯದವರು ಬೇರೆ ಯಾರು ಇರಲು ಸಾಧ್ಯವಿಲ್ಲ. ನಿಮ್ಮ ಕೈಯ್ಯಿಂದ ದಾನ ಮಾಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ. ಈ ಅಂಕಣವನ್ನು ನಿಮ್ಮ ಪ್ರತಿ ಫ್ಯಾಮಿಲಿ ಮೆಂಬರಗೆ, ಸಂಬಂಧಿಕರಿಗೆ, ಎಲ್ಲ ಸ್ನೇಹಿತರಿಗೆ ತಪ್ಪದೆ ಕಳಿಸಿ. ಅವರಾದರೂ ದಾನ ಮಾಡುತ್ತಾರೆ. ನಿಮಗೆ ಗೊತ್ತಿರುವ ಎಲ್ಲರಿಗೂ ಸಿಂಧೂತಾಯಿಯವರ ಬಗ್ಗೆ ಹೇಳಿ. ಅವರ ಬಗ್ಗೆ ಹೆಚ್ಚು ಜನರಿಗೆ ಗೊತ್ತಾಗಲಿ. ಸಮಾಜದಲ್ಲಿ ಒಂದೊಳ್ಳೆ ಬದಲಾವಣೆಯನ್ನು ತನ್ನಿ. ಮನಸ್ಸು ಭಾರವಾಗಿದೆ, ಕಣ್ಣುಗಳು ತುಂಬಿ ಬಂದಿವೆ, ಹೆಚ್ಚಿಗೆ ಬರೆಯಲು ಸಾಧ್ಯವಾಗ್ತಿಲ್ಲ. ಈ ಅಂಕಣವನ್ನು ತಪ್ಪದೆ ಎಲ್ಲರೊಂದಿಗೆ ಶೇರ್ ಮಾಡಿ. ಧನ್ಯವಾದಗಳು, ಬಾಯ್.
Note : This article is totally based on Life story shared by Sindhutai Sapkal in their motivational speeches. All the images used here are taken from their official website Sindhutaisapkal.org for illustration purpose only.
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.