ಗೌತಮ ಬುದ್ಧನನ್ನು ಏಷ್ಯಾದ ಬೆಳಕು ಅಂತಾ ಕರೆಯುತ್ತಾರೆ. ಅವನ ತಂದೆ ಶುದ್ಧೊಧನ ಕಪಿಲವಸ್ತುವಿನ ಶಾಕ್ಯವಂಶದ ರಾಜನಾಗಿದ್ದನು. ಅವನ ಹೆತ್ತ ತಾಯಿ ಮಾಯಾದೇವಿ. ಮಾಯಾದೇವಿ ಗರ್ಭವತಿಯಾಗಿರುವಾಗ ಒಂದು ಕನಸ್ಸನ್ನು ಕಂಡು ಗಾಬರಿಯಾಗಿದ್ದಳು. ಅವಳ ಕನಸ್ಸಲ್ಲಿ ಒಂದು ಬಿಳಿ ಆನೆ ಅವಳಿಗೆ ಹಾದು ಹೋದಂತೆ ಅವಳು ಕನಸು ಕಂಡಿದ್ದಳು. ಮಹಾರಾಣಿ ಮಾಯಾದೇವಿ ಈ ಕನಸಿನ ಬಗ್ಗೆ ರಾಜಾ ಶುದ್ಧೋದನನಿಗೆ ಹೇಳಿದಳು. ಆಗ ರಾಜ ಅದನ್ನು ರಾಜಸಭೆಯಲ್ಲಿ ಪಂಡಿತರೊಂದಿಗೆ, ಜ್ಯೋತಿಷಿಗಳೊಂದಿಗೆ ಚರ್ಚಿಸಿದಾಗ “ಅವಳ ಮಗ ಜಗತ್ತಿಗೆ ಬೆಳಕು ನೀಡುವ ಮಹಾನ ವ್ಯಕ್ತಿಯಾಗ್ತಾನೆ, ಮಹಾ ಋಷಿಯಾಗ್ತಾನೆ, ಆದ್ರೆ ಮಹಾನ ರಾಜನಾಗಲ್ಲ” ಎಂಬುದು ಗೊತ್ತಾಯಿತು. ಇದು ರಾಜಾ ಶುದ್ಧೊದನನನ್ನು ಚಿಂತೆಗೀಡು ಮಾಡಿತು.
ಹೆಣ್ಮಕ್ಕಳು ಹೆರಿಗೆಗೆ ತಮ್ಮ ತವರು ಮನೆಗೆ ಹೋಗುವುದು ವಾಡಿಕೆಯಾಗಿತ್ತು. ಅದಕ್ಕಾಗಿ ಮಹಾರಾಣಿ ಹೆರಿಗೆಗೆ ತನ್ನ ತವರಿಗೆ ಹೊರಟಳು. ಮಾಯಾದೇವಿ ತವರಿಗೆ ಹೋಗುವಾಗ ವಿಶ್ರಾಂತಿಗಾಗಿ ಒಂದು ರಾತ್ರಿ ಲುಂಬಿನಿ ವನದಲ್ಲಿ ನೆಲೆಸಿದಳು. ಅಲ್ಲೇ ಅವಳಿಗೆ ಹೆರಿಗೆ ನೋವು ಶುರುವಾಗಿ ಗಂಡು ಮಗುವಾಯಿತು. ಅವತ್ತು ವೈಶಾಖ ಹುಣ್ಣಿಮೆಯಿತ್ತು. ಹೆರಿಗೆಯಾದ ಕೇವಲ ಏಳೇ ಏಳು ದಿನಗಳ ನಂತರ ಮಾಯಾದೇವಿ ಕಾಯಿಲೆಯಿಂದ ತೀರಿಕೊಂಡಳು. ಆಗ ಅವಳ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಅವಳ ಸ್ವಂತ ಸೋದರಿ ಹಾಗೂ ಶುದ್ಧೋದನನ ಎರಡನೇ ಪತ್ನಿ ಮಹಾ ಪ್ರಜಾಪತಿ ಗೌತಮಿಗೆ ಸಿಕ್ಕಿತು. ಪ್ರಜಾಪತಿ ಆ ಮಗುವಿನ ಸಾಕು ತಾಯಿಯಾದಳು. ಆ ಮಗುವಿಗೆ “ಸಿದ್ಧಾರ್ಥ ಗೌತಮ” ಎಂದು ಹೆಸರಿಡಲಾಯಿತು. ಸಿದ್ಧಾರ್ಥ ಮುಂದೆ ಕಪಿಲವಸ್ತುವಿನ ಸಾಮ್ರಾಟನಾಗಿ ಶಾಕ್ಯವಂಶದ ಹೆಸರನ್ನು ನಾಲ್ಕು ದಿಕ್ಕುಗಳಲ್ಲಿ ಹಬ್ಬಿಸಬೇಕು ಎಂಬುದು ಎಲ್ಲರ ಬಯಕೆಯಾಗಿತ್ತು. ಆದರೆ ವಿಧಿಯ ಆಟ ಬೇರೆಯಾಗಿತ್ತು.
ಸಿದ್ಧಾರ್ಥ ಜನಿಸುವ ಮೊದಲೇ ಅವನು ಮಹಾನ ಸಾಮ್ರಾಟನಾಗಲ್ಲ, ಮಹಾನ ಋಷಿಯಾಗುತ್ತಾನೆ, ಸಂನ್ಯಾಸಿಯಾಗುತ್ತಾನೆ, ಜಗತ್ತಿಗೆ ಹೊಸ ಜ್ಞಾನವನ್ನು ನೀಡುತ್ತಾನೆ ಎಂದು ಬಹಳಷ್ಟು ಜನ ಭವಿಷ್ಯ ನುಡಿದಿದ್ದರು. ಇದು ರಾಜಾ ಶುದ್ಧೋದನನ ಚಿಂತೆಗೆ ಕಾರಣವಾಗಿತ್ತು. ಹೀಗಾಗಿ ಆತ ಸಿದ್ಧಾರ್ಥನನ್ನು ದು:ಖದಿಂದ ದೂರವಿಟ್ಟಿದ್ದನು. ಅವನ ಕಣ್ಣಿಗೆ ಯಾವುದೇ ತರಹದ ದು:ಖ ಕಾಣಿಸದಂತೆ ಅವನನ್ನು ವಿಶೇಷವಾದ ಐಷಾರಾಮಿ ಅರಮನೆಯಲ್ಲಿಟ್ಟಿದ್ದನು. ಅವನ ಮನಸ್ಸು ವೈರಾಗ್ಯದ ಕಡೆಗೆ ಆಕರ್ಷಿತವಾಗಬಾರದು ಎಂಬ ಕಾರಣಕ್ಕೆ ಸುಂದರ ಯುವತಿಯರನ್ನು ಅವನ ಸೇವೆಗೆ ನಿಯೋಜಿಸಿದ್ದನು. ಆದರೆ ಸಿದ್ಧಾರ್ಥ ಅವುಗಳ ಕಡೆಗೆ ಕಿಂಚಿತ್ತೂ ಆಕರ್ಷಿತನಾಗಲಿಲ್ಲ. ಆತ ವೇದ ಪುರಾಣಗಳ ಅಧ್ಯಯನ ಮಾಡಿ ಮೇಧಾವಿಯಾದನು.
ಸಕಲ ಸುಖ ಭೋಗಗಳ ಐಷಾರಾಮಿ ಅರಮನೆಯಲ್ಲಿದ್ದರೂ ಸಹ ಸಿದ್ಧಾರ್ಥನ ಮನಸ್ಸು ಶಾಂತವಾಗಿರಲಿಲ್ಲ. ಅವನಿಗೆ ಹೊರ ಜಗತ್ತನ್ನು ನೋಡುವ ಹಂಬಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಹೀಗಾಗಿ ಆತ ಒಂದಿನ ಎಲ್ಲರ ಕಣ್ತಪ್ಪಿಸಿ ತನ್ನ ಸಾರಥಿ ಚನ್ನನನ್ನು ಕರೆದುಕೊಂಡು ನಗರ ಸಂಚಾರಕ್ಕೆ ಹೋದನು. ಆಗ ಆತ ಮೊದಲ ಸಲ ವಯಸ್ಸಾದ ಮುದುಕನನ್ನು, ರಸ್ತೆಯಲ್ಲಿ ನರಳುತ್ತಾ ಬಿದ್ದ ರೋಗಿಯನ್ನು ಹಾಗೂ ಶವಯಾತ್ರೆಯನ್ನು ನೋಡಿದನು. ಇದನ್ನು ನೋಡಿದ ನಂತರ ಅವನಿಗೆ “ನಾನು ಇದೇ ತರ ಯೌವ್ವನದಲ್ಲಿ ಇರಕ್ಕಾಗಲ್ಲ, ನನಗೂ ವಯಸ್ಸಾಗುತ್ತೆ, ದೇಹವನ್ನು ರಕ್ಷಿಸಿಕೊಳ್ಳದಿದ್ದರೆ ರೋಗ ಅಂಟಿಕೊಂಡು ಸಾವು ಎದುರಾಗುತ್ತದೆ” ಎಂಬುದು ಅರಿವಾಯಿತು. ಅಲ್ಲದೆ ಜಗತ್ತಿನ ದು:ಖದ ಬಗ್ಗೆ ಗೊತ್ತಾಯಿತು. ಅವನಿಗೆ “ಜಗತ್ತು ನನ್ನ ಅರಮನೆಯ ಐಷಾರಾಮಿ ಜೀವನದಂತಿಲ್ಲ, ಜಗತ್ತು ದು:ಖದಿಂದ ತುಂಬಿ ಹೋಗಿದೆ, ಜನ ಅಶಾಂತಿ, ಅಜ್ಞಾನ, ಅನಾರೋಗ್ಯಗಳಿಂದ ನರಳುತ್ತಿದ್ದಾರೆ” ಎಂಬುದು ಮನದಟ್ಟಾಯಿತು. ಅವನ ಮನಸ್ಸಲ್ಲಿ ಅಂತರಯುದ್ಧ ಶುರುವಾಯಿತು. ಆತ ಸಂಸಾರದ ಸತ್ಯದ ಹುಡುಕಾಟದಲ್ಲಿ ಮಗ್ನನಾದನು.
ಯುವರಾಜ ಸಿದ್ಧಾರ್ಥ ಸುಂದರ ಹಾಗೂ ತೇಜಸ್ವಿಯಾಗಿದ್ದನು. ಅವನ ತಂದೆ ಹಾಗೂ ತಾಯಿ ಅವನಿಗೆ ಮದುವೆ ಮಾಡಲು ಮುಂದಾದರು. ಆದರೆ ಅವನ ಮನಸ್ಸು ಈಗಾಗಲೇ ವೈರಾಗ್ಯದ ಕಡೆಗೆ ಆಕರ್ಷಿತವಾಗಿತ್ತು. ಅವನ ಮನಸ್ಸು ಜಗತ್ತಿನ ದು:ಖಕ್ಕೆ ಕಾರಣವೇನು ಎಂಬುದರ ಹುಡುಕಾಟದಲ್ಲಿತ್ತು. ಹೀಗಾಗಿ ಆತ ಮದುವೆಯಾಗಲು ನಿರಾಕರಿಸಿ “ನಾನು ಜನರನ್ನು ಎಲ್ಲ ಸಾಂಸಾರಿಕ ಜಂಜಡಗಳಿಂದ ಮುಕ್ತ ಮಾಡುವ ದಾರಿಯನ್ನು ಹುಡುಕುತ್ತಿರುವೆ, ಸಾಂಸಾರಿಕ ದು:ಖಗಳ ಅಜ್ಞಾನದಲ್ಲಿರುವ ಜನರನ್ನು ನಿದ್ದೆಯಿಂದ ಎಬ್ಬಿಸುವೆ” ಎಂದೆಲ್ಲ ಹೇಳಿದನು. ಆದರೆ ಅವನ ತಂದೆ ರಾಜಾ ಶುದ್ಧೋದನ ಅವನ ಮಾತಿಗೆ ಒಪ್ಪದೆ ಅವನನ್ನು ಮದುವೆಯಾಗುವಂತೆ ಒತ್ತಾಯಿಸಿದನು. ಆಗ ಬೇರೆ ದಾರಿಯಿಲ್ಲದೆ ಸಿದ್ಧಾರ್ಥ ಮದುವೆಗೆ ಒಪ್ಪಿಕೊಂಡನು.
ತಂದೆಯ ಮಾತನ್ನು ಮೀರಲಾಗದೆ ಸಿದ್ಧಾರ್ಥ ಯಶೋಧರಾ ಎಂಬ ಸುಂದರ ಯುವತಿಯನ್ನು ಮದುವೆಯಾದನು. ಅವನ ವ್ಯಾಕುಲತೆ, ಮೌನ, ಅಶಾಂತ ಮುಖ ಯಶೋಧರೆಯ ಚಿಂತೆಗೆ ಕಾರಣವಾಯಿತು. ಆಗವಳು ಅವನೊಂದಿಗೆ ಚರ್ಚಿಸಿದಳು. ಅವನಿಗೆ “ಸಾಂಸಾರಿಕ ಜಡಗಳ ಕಾರಣ ಗೊತ್ತಾಗಬೇಕೆಂದರೆ ಮೊದಲು ಅವು ನಮಗೆ ಅರ್ಥವಾಗಬೇಕು, ನಮ್ಮ ಅನುಭವಕ್ಕೆ ಬರಬೇಕು, ಅವುಗಳನ್ನು ನಾವು ಹುಡುಕಬೇಕು” ಎಂದೇಳಿದಳು. ಅವನಿಗೆ ಒಳ್ಳೇ ಜೀವನಸಾಥಿಯಾದಳು. ಅವರಿಬ್ಬರ ಪ್ರೇಮದ ಸಂಕೇತವಾಗಿ ಅವರಿಗೆ ರಾಹುಲ ಎಂಬ ಮಗ ಜನಿಸಿದನು.
ಸಿದ್ಧಾರ್ಥನ ಪಟ್ಟಾಭಿಷೇಕಕ್ಕೆ ಎಲ್ಲ ತಯಾರಿಗಳಾಗುತ್ತಿದ್ದವು. ಆದರೆ ಅವನಿಗೆ ಸಾಮ್ರಾಟನಾಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವನ ಮನಸ್ಸು ಜಗತ್ತಿನ ದು:ಖದ ಮೂಲವನ್ನು ಹುಡುಕಲು ಒದ್ದಾಡುತ್ತಿತ್ತು. ಅವನ ಪತ್ನಿ ಯಶೋಧರೆ ಹಾಗೂ ಮಗ ರಾಹುಲನ ಪ್ರೀತಿ ಅವನನ್ನು ಮಾನಸಿಕವಾಗಿ ಬಂಧಿಸಿತ್ತು. ಈಗ ಅವನಿಗೆ ಈ ಸಾಂಸಾರಿಕ ಬಂಧನದಿಂದ ಮುಕ್ತಿ ಬೇಕಿತ್ತು. ಅದಕ್ಕಾಗಿ ಮಧ್ಯರಾತ್ರಿ ಜಗವೆಲ್ಲ ಮಲಗಿರುವಾಗ ಅವನೊಬ್ಬನೆದ್ದನು. ಪದೇಪದೇ ಹೆಂಡತಿ ಮತ್ತು ಮಗನ ಮುಖ ನೋಡಿ ಬಹಳಷ್ಟು ಯೋಚಿಸಿದನು. ರಾಜಕುಮಾರ ಸಿದ್ಧಾರ್ಥ ಮಧ್ಯರಾತ್ರಿ ವೈಶಾಖ ಪೂರ್ಣಿಮೆಯ ದಿನ ತನ್ನ ಸಾರಥಿ ಚನ್ನನನ್ನು ಕರೆದುಕೊಂಡು ಕಪಿಲವಸ್ತುವನ್ನು ಬಿಟ್ಟು ಮುಕ್ತಿಯ ಹುಡುಕಾಟದಲ್ಲಿ ಹೊರಟನು. ರಾಜ್ಯದ ಗಡಿ ದಾಟಿದ ನಂತರ ತನ್ನ ತಲೆ ಕೂದಲು ಹಾಗೂ ಕತ್ತಲ್ಲಿನ ಸರವನ್ನು ಕತ್ತರಿಸಿಕೊಟ್ಟು ಮನೆಯಲ್ಲಿ ಕ್ಷೇಮ ಸಂದೇಶ ತಿಳಿಸುವಂತೆ ಹೇಳಿ ಚನ್ನನನ್ನು ಅರ್ಧದಾರಿಯಿಂದ ವಾಪಸ್ಸು ಕಳುಹಿಸಿದನು. ನಂತರ ದಾರಿಯಲ್ಲಿ ಸಿಕ್ಕ ಸಾಧುವೊಬ್ಬನಿಂದ ಕೇಸರಿ ಬಟ್ಟೆ ಹಾಗೂ ಭಿಕ್ಷಾ ಪಾತ್ರೆಯನ್ನು ಬೇಡಿ ಪಡೆದನು. ರಾಜ ಪೋಷಾಕುಗಳನ್ನು ಬಿಚ್ಚಿ ಸಂನ್ಯಾಸಿಯ ಬಟ್ಟೆ ಧರಿಸಿದನು. ತನ್ನ ಮನದಲ್ಲಿ ದಂಗೆಯೆದ್ದ ಪ್ರಶ್ನೆಗಳ ಉತ್ತರ ಹುಡುಕಲು ದಾರಿ ಕಂಡ ಕಡೆಗೆ ಚಲಿಸಿದನು.
ದು:ಖದಿಂದ ಕೂಡಿದ ಸಂಸಾರದಲ್ಲಿ ಮುಕ್ತಿಯ ದಾರಿಯನ್ನು ಹುಡುಕಲು, ನಿಸರ್ಗದ ರಹಸ್ಯಗಳನ್ನು ಭೇಧಿಸಲು ಸಿದ್ಧಾರ್ಥ ತಪಸ್ಸು, ಯೋಗ ಹಾಗೂ ಧ್ಯಾನ ಮಾಡಲು ಪ್ರಾರಂಭಿಸಿದನು. ಆತ ಭಿಕ್ಷೆ ಬೇಡುತ್ತಾ ಮಗಧ ರಾಜ್ಯಕ್ಕೆ ತೆರಳಿದನು. ಆಗ ಜನ ಅವನ ತೇಜಸ್ಸಿಗೆ ಆಕರ್ಷಿತರಾದರು. ರಾಜ್ಯದಲ್ಲಿ ಹೊಸ ತೇಜಸ್ವಿ ಸಂನ್ಯಾಸಿ ಬಂದ ಸುದ್ದಿ ಸಾಮ್ರಾಟ ಬಿಂದುಸಾರನಿಗೂ ತಲುಪಿತು. ಆತ ಸ್ವತಃ ಖುದ್ದಾಗಿ ಬಂದು ಸಿದ್ಧಾರ್ಥನನ್ನು ಏಕಾಂತದಲ್ಲಿ ಭೇಟಿಯಾದನು. ಅವನು ರಾಜಕುಮಾರನ ಪದವಿ ಬಿಟ್ಟು ಸಂನ್ಯಾಸಿಯಾಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದನು. ರಾಜ್ಯ ಭೋಗದ ಸುಖ ಕೊಡಲು ಮುಂದಾದನು. ಆದರೆ ಸಿದ್ಧಾರ್ಥ ಅದನ್ನು ನೇರವಾಗಿ ನಿರಾಕರಿಸಿದನು. ತನಗೆ ಮುಕ್ತಿಯ ದಾರಿ ಸಿಕ್ಕರೆ ಮೊದಲು ಬಿಂದುಸಾರನಿಗೆ ತಿಳಿಸುವೆ ಎಂದು ಅವನಿಗೆ ಮಾತು ಕೊಟ್ಟು ಸಿದ್ಧಾರ್ಥ ಮುನ್ನಡೆದನು.
ಮಗಧ ರಾಜ್ಯದ ತುಂಬೆಲ್ಲ ಸಿದ್ಧಾರ್ಥ ಸಂಚರಿಸಲು ಪ್ರಾರಂಭಿಸಿದನು. ಆಗ ಬಲಿ ಕೊಡಲು ತಂದಿದ್ದ ಕುರಿ ಮರಿ ಕಂಡು ಅವನ ಮನ ಮಲಮಲ ಮರುಗಿತು. ಅದಕ್ಕಾಗಿ ಆತ ಪ್ರಾಣಿ ಬಲಿಯನ್ನು ವಿರೋಧಿಸಿದನು. ಮೂಢನಂಬಿಕೆಗಳನ್ನು ಖಂಡಿಸಿದನು. ಜಾತಿಯತೆಯ ಅಜ್ಞಾನ, ದು:ಖ ಹಾಗೂ ಅಂಧಕಾರದಲ್ಲಿ ಮುಳುಗಿದ ಸಮಾಜದ ಕಣ್ತೆರೆಸಲು ಪ್ರಯತ್ನಿಸಿದನು. ಅವನನ್ನು ನೋಡಿ ಕೆಲವೊಂದಿಷ್ಟು ಸಾಧುಗಳು ಅವನ ಶಿಷ್ಯರಾದರು. ಅವನನ್ನು ಅನುಮಾನಿಸಿ ಅವನ ದಾರಿ ಬಿಟ್ಟು ದೂರ ಹೋದರು. ನಂತರ ತಮ್ಮ ತಪ್ಪಿನ ಅರಿವಾಗಿ ಮತ್ತೆ ಅವನನ್ನು ಸೇರಿಕೊಂಡರು.
ಸಿದ್ಧಾರ್ಥ ಈಗೀನ ಬಿಹಾರದ ಬೋದಗಯಾದಲ್ಲಿರುವ ಒಂದು ಬೋಧಿ ವೃಕ್ಷದ ಕೆಳಗೆ ಕುಳಿತು ಕಠಿಣ ಸಿದ್ಧಿ ಸಾಧನೆಯಲ್ಲಿ ನಿರತನಾದನು. 6 ವರ್ಷ ಗಾಳಿ, ಮಳೆ, ಛಳಿ, ಬಿಸಿಲಿಗೆ ಜಗ್ಗದೆ ಅದೇ ಮರದ ಕೆಳಗೆ ಕುಳಿತು ತಪಸ್ಸು ಮಾಡಿದನು. ನಂತರ ಅವನಿಗೆ ಹುಣ್ಣಿಮೆಯ ದಿನ ಜ್ಞಾನೋದಯವಾಯಿತು. ಅವನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಮುಕ್ತಿಯ ಮಾರ್ಗ ಅವನಿಗೆ ಸಿಕ್ಕಿತು. ಆತ ನಿರ್ವಾಣದ (ಮುಕ್ತಿಯ) ದಾರಿಯನ್ನು ಬೋಧಿಸಲು ಪ್ರಾರಂಭಿಸಿದನು. ಅಲ್ಲಿಂದ ಸಿದ್ಧಾರ್ಥ ಗೌತಮ ಬುದ್ಧನಾಗಿ ಬದಲಾದನು.
ಬಿಂದುಸಾರನಿಗೆ ಮಾತು ಕೊಟ್ಟಂತೆ ಬುದ್ಧ ಅವನಿಗೆ ಮೊದಲು ತನ್ನ ಜ್ಞಾನ ಹಾಗೂ ಮುಕ್ತಿಯ ದಾರಿ ಬೋಧಿಸಿದನು. ಸಾರನಾಥದಲ್ಲಿ ಧರ್ಮಚಕ್ರ ಸ್ಥಾಪಿಸಿ ಮೊದಲ ಉಪದೇಶ ನೀಡಿದನು. ಜಗತ್ತನ್ನು ದು:ಖ ಹಾಗೂ ವ್ಯಥೆಗಳಿಂದ ದೂರ ಮಾಡುವ ಮಾರ್ಗ ತೋರಿಸಿದನು. ಸಾಹಸ, ಕರ್ಮ, ಇಂದ್ರಿಯಗಳ ನಿಯಂತ್ರಣ, ಮನಸ್ಸಿನ ನಿಯಂತ್ರಣ, ಮಿತ ಆಹಾರ, ಯೋಗ, ಧ್ಯಾನಗಳಿಂದ ಕೂಡಿದ ಮೋಕ್ಷಕ್ಕೆ ದಾರಿ ತೋರಿಸುವ ಅಷ್ಟಾಂಗ ಯೋಗ ಮಾರ್ಗವನ್ನು ಬೋಧಿಸಿದನು. ದು:ಖದಿಂದ ಕೂಡಿದ ಸಂಸಾರದ ಕಣ್ಣು ತೆರೆಸಿದನು. ನಂತರ ತನ್ನ ಶಿಷ್ಯರೊಂದಿಗೆ ತಾನು ಬಿಟ್ಟು ಬಂದ ಕಪಿಲವಸ್ತುವಿಗೆ ಮರಳಿ ಹೋದನು. ಮಗನಾಗಿ ಅಲ್ಲ, ಬರೀ ಬುದ್ಧನಾಗಿ.
ಬುದ್ಧ ತನ್ನ ವಿರಹದಿಂದ ಬಳಲಿದ ತನ್ನ ಪತ್ನಿ ಯಶೋಧರೆಗೆ ಸಾಂತ್ವನ ಹೇಳಿದನು. ಆಗ ಅವನಿಗೆ ಅವಳ ತ್ಯಾಗದ ಬಗ್ಗೆ ಅರಿವಾಯಿತು. ಬುದ್ಧ ಅವಳ ಅನುಮತಿ ಪಡೆದುಕೊಂಡೆ ಸಂನ್ಯಾಸಿ ಜೀವನಕ್ಕೆ ಕಾಲಿಟ್ಟಿದ್ದನು. ಆದರೆ ಅವನು ರಾತ್ರೋರಾತ್ರಿ ಅರಮನೆ ಬಿಟ್ಟು ಬಂದಾಗ ಮರು ದಿನದಿಂದ ಯಶೋಧರಾ ಕೂಡ ಅವನಂತೆ ಅರಮನೆಯಲ್ಲೇ ಸಂನ್ಯಾಸಿ ಜೀವನವನ್ನು ಪ್ರಾರಂಭಿಸಿದ್ದಳು. ಬರೀ ಏಳು ದಿನದ ಮಗು ರಾಹುಲನಿಗಾಗಿ ಅರಮನೆಯಲ್ಲಿದ್ದಳು ಅಷ್ಟೇ. ಅವಳು ಕೂಡ ಬುದ್ಧನಂತೆ ಬಣ್ಣದ ಬಟ್ಟೆ ತ್ಯಜಿಸಿ ಸಂನ್ಯಾಸಿನಿಯಾಗಿ ಕೇಸರಿ ಸೀರೆ ಧರಿಸಲು ಪ್ರಾರಂಭಿಸಿದ್ದಳು. ಅವಳನ್ನು ಮರುಮದುವೆಯಾಗಲು ಬಹಳಷ್ಟು ಜನ ರಾಜರು ಮುಂದೆ ಬಂದಿದ್ದರು. ಆದರೆ ಆಕೆ ಎಲ್ಲರನ್ನು ನಿರಾಕರಿಸಿದಳು. ಏಕೆಂದರೆ ಆಕೆ ಬುದ್ಧನಿಗೆ ಹಾಗೂ ಅವನ ನಿರ್ಧಾರಕ್ಕೆ ಅಡಿಯಾಳಾಗಿದ್ದಳು. ಬರೀ ಒಂದೇ ಸಮಯಕ್ಕೆ ಊಟ ಮಾಡುತ್ತಿದ್ದಳು. ಆಭರಣಗಳನ್ನು ಹಾಗೂ ಐಶಾರಾಮಿ ಜೀವನವನ್ನು ತ್ಯಜಿಸಿದ್ದಳು. ನೆಲದ ಮೇಲೆ ಮಲಗುತ್ತಿದ್ದಳು. ಅವಳು ಸಹ ಬುದ್ಧನಂತೆ ಸಂನ್ಯಾಸಿ ಜೀವನವನ್ನೇ ಸಾಗಿಸಿದ್ದಳು. ಆದರೂ ಸಹ ಅವಳು ಬುದ್ಧನಿಗೆ ಏನು ಕೇಳಲಿಲ್ಲ. ತನ್ನನ್ನು ಅವನ ಮಾರ್ಗದಲ್ಲಿ ಕೊಂಡೊಯ್ಯುವಂತೆ ಕೇಳಿಕೊಂಡಳು. ಮುಂದೆ ಬೌದ್ಧ ಭಿಕ್ಷುಣಿಯಾಗಿ ಬುದ್ಧನನ್ನು ಅನುಸರಿಸಿದಳು. ಅವಳ ಅತ್ತೆ ಅಂದರೆ ಬುದ್ಧನ ಸಾಕು ತಾಯಿ ಪ್ರಜಾಪತಿ ಕೂಡ ಅವಳನ್ನು ಸೇರಿಕೊಂಡಳು. ಇದೇ ಸಮಯಕ್ಕೆ ಅವನ ತಂದೆ ಕಪಿಲವಸ್ತುವಿನಲ್ಲಿರಲು ವಿನಂತಿಸಿದಾಗ ಆತ ನಿರಾಕರಿಸಿದನು. ಇದೇ ಶೋಕದಲ್ಲಿ ಅವನ ತಂದೆ ತೀರಿಕೊಂಡನು. ಬುದ್ಧ ತಂದೆಯ ಅಂತಿಮ ಸಂಸ್ಕಾರದ ಕಾರ್ಯಗಳನ್ನು ನಿಭಾಯಿಸಿ ಲೋಕೋದ್ಧಾರಕ್ಕಾಗಿ ಮುನ್ನಡೆದನು.
ಬುದ್ಧ ತನ್ನ ಧರ್ಮೋಪದೇಶದ ಸಮಯದಲ್ಲಿ ಯಾವುದೇ ಪವಾಡಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸಲಿಲ್ಲ. ಬದಲಾಗಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸತ್ಯ, ಸುಖ, ಶಾಂತಿ, ನೆಮ್ಮದಿ, ಮೋಕ್ಷದ ದಾರಿ ತೋರಿಸಿದನು. ಬುದ್ಧ ಕಳಂಕಿತರನ್ನು, ಕ್ರೂರರನ್ನು ಸಹ ಮನವರ್ತಿಸಿ ಸಮಾಜಮುಖಿಗಳಾಗಿ ಬದಲಾಯಿಸಿದನು. ಅದಕ್ಕೆ ಉದಾಹರಣೆ ಎಂಬಂತೆ ವೈಶಾಲಿ ನಗರದ ವೈಷ್ಯ ಆಮ್ರಪಾಲಿ ತನ್ನ ಆಸ್ತಿಯನ್ನೆಲ್ಲ ದಾನ ಮಾಡಿ ಬುದ್ಧನ ಶಿಷ್ಯೆಯಾದಳು. ಬುದ್ಧನನ್ನು ಕೊಲ್ಲಲು ಬಂದ ಅಂಗುಲಿಮಾಲ ಎಲ್ಲ ಬಿಟ್ಟು ಬುದ್ಧನ ಶಿಷ್ಯನಾಗಿ ಅಹಿಂಸೆಯ ದಾರಿಯಲ್ಲಿ ಮುನ್ನಡೆದನು. ತನ್ನ ತಂದೆ ಬಿಂದುಸಾರನನ್ನು ಹತ್ಯೆಗೈದ ಅಜಾತಶತ್ರುವನ್ನು ಬದಲಿಸಿದನು. ಈ ರೀತಿ ಬುದ್ಧ ಸಮಾಜದ ಉದ್ಧಾರ ಮಾಡಿದನು.
ಒಂದಿನ ಬುದ್ಧ ಧರ್ಮೋಪದೇಶ ಮಾಡುವಾಗ ಒಬ್ಬಳು ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ ತನ್ನ ಮಗುವನ್ನು ಬದುಕಿಸುವಂತೆ ಬೇಡಿಕೊಂಡಳು. ಆದರೆ ಇದು ಅಸಾಧ್ಯವಾಗಿತ್ತು. ಏಕೆಂದರೆ ಸಾವಿನಿಂದ ಪಾರಾಗಲು ಸ್ವತಃ ಬುದ್ಧನಿಗೂ ಕೂಡ ಸಾಧ್ಯವಿರಲಿಲ್ಲ. ಅದಕ್ಕಾಗಿ ಆತ ಆಕೆಗೆ ವಾಸ್ತವವನ್ನು ಅರ್ಥ ಮಾಡಿಸಲು “ಸಾವಿಲ್ಲದ ಮನೆಯ ಸಾವಿಸೆ ಕಾಳನ್ನು ತೆಗೆದುಕೊಂಡು ಬಾ” ಎಂದು ಕಳುಹಿಸಿದನು. ಆಕೆ ಎಲ್ಲ ಕಡೆಗೆ ಹುಡುಕಿದಳು. ಆದರೆ ಅವಳಿಗೆ ಎಲ್ಲಿಯೂ ಸಾವಿಲ್ಲದ ಮನೆಯ ಸಾಸಿವೆ ಸಿಗಲಿಲ್ಲ. ಅವಳಿಗೆ ಕೊನೆಗೆ ಜ್ಞಾನೋದಯವಾಯಿತು. ಬುದ್ಧನದ್ದು ಪವಾಡದ ಧರ್ಮವಾಗಿರಲಿಲ್ಲ. ದು:ಖದ ಅಂತ್ಯದ ಧರ್ಮವಾಗಿತ್ತು. ಸತ್ಯವನ್ನು ಅರಿಯುವ ಧರ್ಮವಾಗಿತ್ತು. ಅಷ್ಟಾಂಗ ಯೋಗ, ಮಿತ ಆಹಾರ ಸೇವನೆ, ಉಸಿರಾಟದ ನಿಯಂತ್ರಣ, ಮನಸ್ಸಿನ ನಿಯಂತ್ರಣವನ್ನು ಬೋಧಿಸುವ ಧರ್ಮವಾಗಿತ್ತು. ಯುದ್ಧ ಬುದ್ಧನ ಮಾರ್ಗವಾಗಿರಲಿಲ್ಲ. ಪ್ರೀತಿ ಅವನ ಮಾರ್ಗವಾಗಿತ್ತು. ದು:ಖದಿಂದ ಕೂಡಿದ ಸಂಸಾರದಲ್ಲಿ ಸಂತೋಷದ ನದಿಯನ್ನು ಹರಿಸುವುದು ಬುದ್ಧನ ಧರ್ಮವಾಗಿತ್ತು. ಇಂಥ ಮಹಾನ ಧರ್ಮೋಪದೇಶ ಮಾಡುತ್ತಾ ಗೌತಮ ಬುದ್ಧ ಕುಶಿ ನಗರದಲ್ಲಿ ಹುಣ್ಣಿಮೆಯ ದಿನ ನಿರ್ವಾಣವನ್ನು ಹೊಂದಿದನು. ಏಷ್ಯಾದ ಬೆಳಕೆಂದು ಗುರ್ತಿಸಲ್ಪಟ್ಟನು. ಇದೀಷ್ಟು ಗೌತಮ ಬುದ್ಧನ ಜೀವನಕಥೆ. ಇದನ್ನು ಲೈಕ ಮಾಡಿ ಮತ್ತು ಶೇರ್ ಮಾಡಿ…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.