ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಸಾಧನೆಯ ದಾರಿಯಲ್ಲಿ ಮುನ್ನಡೆಯುತ್ತಿರುವ ಎಲ್ಲರಿಗೂ ಚಾಣಕ್ಯನ ಹೆಸರು ಗೊತ್ತಿರುತ್ತದೆ. ಚಾಣಕ್ಯನ ನಿಜವಾದ ಹೆಸರು ವಿಷ್ಣುಗುಪ್ತ. ಅವನನ್ನು ಕೌಟಿಲ್ಯ ಎಂತಲೂ ಕರೆಯುತ್ತಾರೆ. ಚಾಣಕ್ಯ ಒಬ್ಬ ಮಹಾನ್ ಶಿಕ್ಷಕ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ, ನ್ಯಾಯವಾದಿ, ಪ್ರಧಾನಮಂತ್ರಿ ಹಾಗೂ ರಾಜತಾಂತ್ರಿಕ ಸಲಹೆಗಾರನಾಗಿದ್ದನು. ಅವನು ಬರೆದ “ಅರ್ಥಶಾಸ್ತ್ರ” ಗ್ರಂಥ ಭಾರತದ ರಾಜನೀತಿ ಹಾಗೂ ಅರ್ಥಶಾಸ್ತ್ರಕ್ಕೆ ಭದ್ರ ಬುನಾದಿ ಹಾಕಿತು. ಆದ್ದರಿಂದ ಚಾಣಕ್ಯ ಬರೆದ ಅರ್ಥಶಾಸ್ತ್ರವನ್ನು ಚಾಣಕ್ಯ ನೀತಿ ಎಂದು ಕರೆಯುತ್ತಾರೆ. ಜೊತೆಗೆ ಅವನನ್ನು ಭಾರತದ ಮೆಕವಲ್ಲಿ ಎಂದು ಕರೆಯುತ್ತಾರೆ.
ಮೌರ್ಯ ಸಾಮ್ರಾಜ್ಯದ ಉಗಮಕ್ಕಿಂತ ಮುಂಚೆ ಉತ್ತರ ಭಾರತ ನಂದರ ಹಿಡಿತದಲ್ಲಿತ್ತು. ಸಮರ್ಥ ರಾಜಪ್ರಭುತ್ವದ ಕೊರತೆಯಿಂದಾಗಿ ದರೋಡೆಕೋರರಾಗಿದ್ದ ನಂದರು ರಾಜರಾಗಿ ಜನರನ್ನು ಸುಲಿಗೆ ಮಾಡುತ್ತಿದ್ದರು. ಇಂಥ ನಂದರನ್ನು ಕಿತ್ತೊಗೆದು ಮೌರ್ಯ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಚಾಣಕ್ಯನದ್ದೊಂದು ದೊಡ್ಡ ಕೈಯಿದೆ. ಚಾಣಕ್ಯ ಚಂದ್ರಗುಪ್ತ ಹಾಗೂ ಬಿಂದುಸಾರರಿಬ್ಬರಿಗೂ ಪ್ರಧಾನಮಂತ್ರಿ ಹಾಗೂ ರಾಜತಾಂತ್ರಿಕ ಸಲಹೆಗಾರನಾಗಿ ಕೆಲಸ ಮಾಡಿದನು.
ಚಾಣಕ್ಯನ ಜನನ ಕ್ರಿಸ್ತಪೂರ್ವ 371ರಲ್ಲಿ ತಕ್ಷಶಿಲೆಯ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಾಯಿತು. ಅವನ ತಂದೆ ಚಣಕ(ಚನನ) ಹಾಗೂ ತಾಯಿ ಚನೇಶ್ವರಿ. ಬಾಲ್ಯದಲ್ಲಿಯೇ ಚಾಣಕ್ಯ ವೇದಗಳನ್ನು ಅಧ್ಯಯನ ಮಾಡಿ ರಾಜನೀತಿಯನ್ನು ತಿಳಿದುಕೊಂಡನು. ಅವನಿಗೆ ಒಂದು ಬುದ್ಧಿಯ ಕೋರೆ ಹಲ್ಲಿತ್ತು. ಆ ಹಲ್ಲು ರಾಜರಾಗುವ ಸಂಕೇತ ಎಂಬ ನಂಬಿಕೆಯಿತ್ತು. ಒಂದಿನ ಅವನ ತಾಯಿ ಒಬ್ಬ ಜೋತಿಷಿಯ ಮಾತನ್ನು ನಂಬಿ “ಈತ ದೊಡ್ಡವನಾದ ಮೇಲೆ ರಾಜನಾಗುತ್ತಾನೆ, ರಾಜನಾದಾಗ ತನ್ನನ್ನು ಮರೆತು ಬಿಡುತ್ತಾನೆ…” ಎಂಬ ಭಯವನ್ನು ವ್ಯಕ್ತಪಡಿಸಿದಳು. ಆಗ ಚಾಣಕ್ಯ ತನ್ನ ಬುದ್ಧಿಯ ಹಲ್ಲನ್ನು ಮುರಿದು ಬೀಸಾಕಿ ತನ್ನ ತಾಯಿಗೆ “ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆ ಚಿಂತಿಸದಿರು” ಎಂದು ವಚನವಿಟ್ಟನು.
ಚಾಣಕ್ಯನ ಶಿಕ್ಷಣ ತಕ್ಷಶಿಲೆಯಲ್ಲಾಯಿತು. ಆತ ನೋಡೋಕೆ ಒಂಚೂರು ಸುಂದರವಾಗಿರಲಿಲ್ಲ. ಆತನ ಮುರಿದ ಹಲ್ಲು, ಕಪ್ಪು ಮೈಬಣ್ಣ ಹಾಗೂ ಓರೆಗಾಲನ್ನು ನೋಡಿ ಎಲ್ಲರೂ ಅವನನ್ನು ಗೇಲಿ ಮಾಡಿಕೊಂಡು ನಗುತ್ತಿದ್ದರು. ಆದ್ದರಿಂದ ಆತನ ಕಂಗಳಲ್ಲಿ ಯಾವಾಗಲೂ ಕೋಪದ ಜ್ವಾಲೆ ಕಂಗೊಳಿಸುತ್ತಿತ್ತು.
ಚಾಣಕ್ಯ ತನ್ನ ಶಿಕ್ಷಣ ಮುಗಿದ ನಂತರ ತಕ್ಷಶಿಲೆ, ನಳಂದಾ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದನು. “ಮೈಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖ ಕೊಡುತ್ತಾಳೆ. ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನಪೂರ್ತಿ ಸುಖ ಕೊಡುತ್ತಾಳೆ” ಎಂಬುದು ಚಾಣಕ್ಯನ ಬಲವಾದ ನಂಬಿಕೆಯಾಗಿತ್ತು. ಆದ್ದರಿಂದ ಆತ ತನ್ನ ಬ್ರಾಹ್ಮಣ ಕುಲದಲ್ಲೇ ಯಶೋಧರಾ ಎಂಬುವಳನ್ನು ಮದುವೆಯಾದನು. ಆಕೆಯೂ ಅವನಂತೆ ಸುಂದರವಾಗಿರಲಿಲ್ಲ. ಅವಳ ಕಪ್ಪು ಮೈಬಣ್ಣ ಕೆಲವರ ಕೇಕೆ ನಗುವಿಗೆ ಕಾರಣವಾಗುತ್ತಿತ್ತು. ಒಮ್ಮೆ ಅವನ ಹೆಂಡತಿ ತನ್ನ ಸಹೋದರನ ಮನೆಯಲ್ಲಿನ ಸಮಾರಂಭಕ್ಕೆ ಹೋದಾಗ ಎಲ್ಲರೂ ಚಾಣಕ್ಯನ ಬಡತನವನ್ನು ಕಂಡು ಕೇಳಿ ಗೇಲಿ ಮಾಡಿದರು. ಇದರಿಂದ ದು:ಖಿತಳಾದ ಅವನ ಪತ್ನಿ ಅವನಿಗೆ ರಾಜಾ ಧನನಂದನನ್ನು ಭೇಟಿಯಾಗಿ ಸ್ವಲ್ಪ ಸಂಪತ್ತನ್ನು ಉಡುಗೊರೆಯಾಗಿ ಪಡೆಯುವಂತೆ ಸಲಹೆ ನೀಡಿದಳು.
ಮಗಧದ ಸಾಮ್ರಾಟ ಧನನಂದ ಬ್ರಾಹ್ಮಣರಿಗಾಗಿ ಪುಷ್ಪಪುರದಲ್ಲಿ ಒಂದು ಔತಣಕೂಟವನ್ನು ಆಯೋಜಿಸಿದ್ದನು. ಅದರಲ್ಲಿ ರಾಜಾ ಧನನಂದನಿಗೆ “ಅಖಂಡ ಭಾರತದ ಸಲಹೆ ನೀಡಿ” ಉಡುಗೊರೆಯನ್ನು ಪಡೆಯುವ ಆಸೆಯಿಂದ ಚಾಣಕ್ಯನು ಸಹ ಭಾಗಿಯಾಗಿದ್ದನು. ಆದರೆ ಚಾಣಕ್ಯನ ಕುರೂಪ ರೂಪವನ್ನು ನೋಡಿ ಧನನಂದ ಅವನನ್ನು ಅವಮಾನಿಸಿದನು. ಅವನ ಮಾತನ್ನು ಧಿಕ್ಕರಿಸಿದನು. ಆಗ ಕೋಪಗೊಂಡ ಚಾಣಕ್ಯ ತನ್ನ ಜನಿವಾರವನ್ನು ಬೀಸಾಕಿ “ನಂದ ಸಾಮ್ರಾಜ್ಯವನ್ನು ನಾಶ ಮಾಡುವುದಾಗಿ” ಪ್ರತಿಜ್ಞೆ ಮಾಡಿದನು. ಆಗ ಧನನಂದ ಅವನನ್ನು ಬಂಧಿಸಲು ಆದೇಶಿಸಿದನು. ಆದರೆ ಚಾಣಕ್ಯ ಮಾರುವೇಷದಲ್ಲಿ ಅಲ್ಲಿಂದ ತಪ್ಪಿಸಿಕೊಂಡನು.
ಧನನಂದನ ಆಸ್ಥಾನದಿಂದ ತಪ್ಪಿಸಿಕೊಂಡ ನಂತರ ಚಾಣಕ್ಯ ತಲೆ ಮರೆಸಿಕೊಂಡು ಮಗಧದ ಸುತ್ತಮುತ್ತ ತಿರುಗಾಡಲು ಪ್ರಾರಂಭಿಸಿದನು. ಈ ಸಮಯದಲ್ಲಿ ಆತ ತನ್ನ ವೈರಿ ಧನನಂದನ ಮಗನಾದ ಪಬ್ಬಟನ ಸ್ನೇಹ ಸಂಪಾದಿಸಿದನು. ಅವನ ಮನವೊಲಿಸಿ ಅವನಿಂದ ರಾಜಮುದ್ರೆಯುಳ್ಳ ಉಂಗುರವನ್ನು ಪಡೆದುಕೊಂಡು ಕಾಡು ಸೇರಿದನು. ಚಾಣಕ್ಯ ತನ್ನ ಬುದ್ಧಿ ಉಪಯೋಗಿಸಿ ಆ ರಾಜಮುದ್ರೆಯುಳ್ಳ ಉಂಗುರದಿಂದ 80 ಕೋಟಿ ಬಂಗಾರದ ವರಹಗಳನ್ನು ಸಂಪಾದಿಸಿದನು. ಅಷ್ಟೊಂದು ವರಹಗಳನ್ನು ಕಾಡಲ್ಲಿ ಒಂದು ಗುಂಡಿ ತೋಡಿ ಭದ್ರವಾಗಿರಿಸಿ, ಧನನಂದನನ್ನು ಮಟ್ಟ ಹಾಕಬಲ್ಲ ಶೂರನನ್ನು ಹುಡುಕಲು ಹೊರಟನು. ಮದವೇರಿದ ಧನನಂದನ ನಂದ ಸಾಮ್ರಾಜ್ಯವನ್ನು ಬೇರು ಸಮೇತ ಕಿತ್ತೊಗೆಯಬಲ್ಲ ಸಾಹಸಿಯನ್ನು ಚಾಣಕ್ಯ ಹುಡುಕುತ್ತಿದ್ದನು. ಅದೇ ಸಮಯಕ್ಕೆ ಅವನ ಕಣ್ಣಿಗೆ ಚಂದ್ರಗುಪ್ತ ಕಾಣಿಸಿದನು. ಚಾಣಕ್ಯ ಅವನ ಸಾಕು ತಂದೆತಾಯಿಗಳಿಗೆ 1000 ಚಿನ್ನದ ನಾಣ್ಯಗಳನ್ನು ನೀಡಿ ಅವನನ್ನು ತನ್ನೊಂದಿಗೆ ಕರೆದುಕೊಂಡು ಕಾಡಿಗೆ ಹೋದನು. ಸದ್ಯಕ್ಕೆ ಧನನಂದನ ತಲೆ ತೆಗೆಯಲು ಚಾಣಕ್ಯನ ಬಳಿ ಎರಡು ಅಸ್ತ್ರಗಳಿದ್ದವು. ಅವುಗಳಲ್ಲಿ ಚಂದ್ರಗುಪ್ತ ಒಬ್ಬನಾದರೆ ಮತ್ತೊಬ್ಬ ಪಬ್ಬಟನಾಗಿದ್ದನು. ಚಾಣಕ್ಯ ಈ ಇಬ್ಬರಲ್ಲಿ ಒಬ್ಬರಿಗೆ ತರಬೇತಿ ನೀಡಿ ಸಾಮ್ರಾಟನನ್ನಾಗಿಸಲು ನಿರ್ಧರಿಸಿದನು. ಅದಕ್ಕಾಗಿ ಅವರಿಬ್ಬರ ಮಧ್ಯೆ ಒಂದು ಸಣ್ಣ ಪರೀಕ್ಷೆಯನ್ನಿಟ್ಟನು. ಈ ಪರೀಕ್ಷೆಯಲ್ಲಿ ಚಂದ್ರಗುಪ್ತ ಪಬ್ಬಟನ ತಲೆ ತೆಗೆದು ವಿಜಯಿಶಾಲಿಯಾದನು.
ಪಬ್ಬಟನ ತಲೆ ತೆಗೆದು ತಾನಿಟ್ಟ ಪರೀಕ್ಷೆಯಲ್ಲಿ ವಿಜಯಿಶಾಲಿಯಾದ ಚಂದ್ರಗುಪ್ತನ ಮೇಲೆ ಚಾಣಕ್ಯನಿಗೆ ಹೆಮ್ಮೆಯಿತ್ತು. ಚಾಣಕ್ಯ ಅವನಿಗೆ 7 ವರ್ಷಗಳ ತನಕ ಕಠಿಣ ಸೇನಾ ತರಬೇತಿ ನೀಡಿದನು. ಚಾಣಕ್ಯನ ಮಾರ್ಗದರ್ಶನದಲ್ಲಿ ಚಂದ್ರಗುಪ್ತ ಒಬ್ಬ ಸಮರ್ಥ ಸೇನಾನಿಯಾಗಿ ರೂಪುಗೊಂಡನು. ಧನನಂದನ ನಂದ ಸಾಮ್ರಾಜ್ಯವನ್ನು ಉರುಳಿಸಿ ಮೌರ್ಯ ಸಾಮಾಜ್ಯವನ್ನು ಸ್ಥಾಪಿಸಲು ಚಾಣಕ್ಯ ಅತ್ಯಂತ ಉತ್ಸಾಹಿಯಾಗಿದ್ದನು. ಅದಕ್ಕಾಗಿ ಚಂದ್ರಗುಪ್ತ ಸ್ವಲ್ಪವೂ ಮುಂದಾಲೋಚನೆ ಮಾಡದೇ ಸಣ್ಣಪುಟ್ಟ ಸೈನ್ಯ ಕಟ್ಟಿಕೊಂಡು ನಂದರ ರಾಜಧಾನಿ ಮಗಧದ ಮೇಲೆ ದಾಳಿ ಮಾಡಿದನು. ಆದರೆ ಮಹಾ ಸಾಗರದಂಥ ನಂದರ ಸೈನ್ಯದೆದುರು ಚಂದ್ರಗುಪ್ತನ ಪುಟ್ಟ ಸೈನ್ಯ ಧೂಳಿಪಟವಾಯಿತು. ಆತುರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಆರಂಭದಲ್ಲೇ ಚಾಣಕ್ಯನ ಕೈ ಸುಟ್ಟಿತು. ನಿರಾಸೆಯ ಮುಖವೊತ್ತು ಚಾಣಕ್ಯ ಹಾಗೂ ಚಂದ್ರಗುಪ್ತ ತಲೆಮರೆಸಿಕೊಂಡು ಮಾರುವೇಷದಲ್ಲಿ ಸಂಚರಿಸಲು ಪ್ರಾರಂಭಿಸಿದರು.
ಒಂದಿನ ಚಾಣಕ್ಯ ಹಾಗೂ ಚಂದ್ರಗುಪ್ತ ಮಾರುವೇಷದಲ್ಲಿ ಮಗಧದಲ್ಲಿ ತಿರುಗಾಡುವಾಗ ಅವರಿಗೆ ತನ್ನ ಮಗನಿಗೆ ಬೈಯ್ಯುತ್ತಿದ್ದ ತಾಯಿಯಿಂದ ಜ್ಞಾನೋದಯವಾಯಿತು. ಒಬ್ಬಳು ತಾಯಿ ಬಿಸಿ ರೊಟ್ಟಿಯ ಮಧ್ಯೆಕ್ಕೆ ಕೈ ಹಾಕಿ ತಿನ್ನಲು ಪ್ರಯತ್ನಿಸಿ ಕೈ ಸುಟ್ಟುಕೊಂಡ ಮಗನಿಗೆ ಬೈಯ್ಯುತ್ತಿದ್ದಳು. “ನೇರವಾಗಿ ಬಿಸಿ ರೊಟ್ಟಿಯ ಮಧ್ಯೆ ಕೈ ಹಾಕಿದರೆ ಸುಡುವುದೇ ತಾನೇ? ನೀನು ಸಹ ಮೊದಲು ಗಡಿ ಪ್ರದೇಶಗಳನ್ನು ವಶಪಡಿಸಿಕೊಂಡು ಆನಂತರ ರಾಜಧಾನಿಯ ಮೇಲೆ ದಾಳಿ ಮಾಡುವುದನ್ನು ಬಿಟ್ಟು, ಮೊದಲು ನೇರವಾಗಿ ರಾಜಧಾನಿಯ ಮೇಲೆ ದಾಳಿ ಮಾಡಿ ಕೈಸುಟ್ಟುಕೊಂಡ ಪೆದ್ದ ಚಾಣಕ್ಯನಂತಾಡುತ್ತಿರುವೆಯಲ್ಲ. ಮೊದಲು ರೊಟ್ಟಿಯ ಅಂಚನ್ನು ತಿನ್ನು, ಆಮೇಲೆ ಉಳಿದ ಮಧ್ಯದ ಭಾಗಕ್ಕೆ ಕೈ ಹಾಕು” ಎಂದು ಹೇಳುತ್ತಿದ್ದಳು. ಅದನ್ನು ಮಾರುವೇಷದಲ್ಲಿದ್ದ ಚಾಣಕ್ಯ ಹಾಗೂ ಚಂದ್ರಗುಪ್ತ ಕೇಳಿಸಿಕೊಂಡರು. ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಮೊದಲು ಗಡಿ ಪ್ರದೇಶಗಳನ್ನು ವಶಪಡಿಸಿಕೊಳ್ಳದೆ ಆತುರದಲ್ಲಿ ನೇರವಾಗಿ ರಾಜಧಾನಿ ಪಾಟಲೀಪುತ್ರದ ಮೇಲೆ ದಾಳಿ ಮಾಡಿದ್ದು ದೊಡ್ಡ ತಪ್ಪಾಯಿತು ಎಂದವರು ಪಶ್ಚಾತ್ತಾಪ ಪಟ್ಟುಕೊಂಡರು. ಚಾಣಕ್ಯ ತನಗೆ ಜ್ಞಾನೋದಯ ಮಾಡಿಸಿದ ಆ ಮಹಾತಾಯಿಗೆ ನಮಿಸಿ ಮುನ್ನಡೆದನು.
ಚಾಣಕ್ಯನ ಸಲಹೆಯ ಮೇರೆಗೆ ಚಂದ್ರಗುಪ್ತ ಗಡಿ ಪ್ರದೇಶಗಳ ಮೇಲೆ ದಾಳಿ ಅವುಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದನು. ಕಾಡಿನಲ್ಲಿ ಕೆಲಸವಿಲ್ಲದೆ ಅಲೆಯುತ್ತಿದ್ದ ಜನರನ್ನು ತನ್ನ ಸೈನ್ಯದಲ್ಲಿ ಸೇರಿಸಿಕೊಂಡು ಚಂದ್ರಗುಪ್ತ ಅವರಿಗೆ ತರಬೇತಿ ನೀಡಿದನು. ಎಲ್ಲ ತರಹದಿಂದಲೂ ಸೈನ್ಯ ಸಮರ್ಥವಾಗಿ ಸಿದ್ಧವಾದ ಮೇಲೆ ಚಾಣಕ್ಯ ತಾನು ಕಾಡಿನಲ್ಲಿ ಅಡಗಿಸಿಟ್ಟಿದ್ದ ಬಂಗಾರದ ನಾಣ್ಯಗಳನ್ನು ಹೊರತೆಗದು ಸೈನ್ಯಕ್ಕೆ ಬೇಕಾದ ಎಲ್ಲ ಅವಶ್ಯಕತೆಗಳನ್ನು ಒದಗಿಸಿ ಅದನ್ನು ಮತ್ತಷ್ಟು ಬಲಪಡಿಸಿದನು. ಗಡಿಯಲ್ಲಿನ ಕೆಲವು ಸಣ್ಣಪುಟ್ಟ ರಾಜರು ಚಂದ್ರಗುಪ್ತನ ಸೈನ್ಯದಲ್ಲಿ ಸೇರಿಕೊಳ್ಳಲು ಹಿಂದೇಟು ಹಾಕಿದರು. ಅಂಥವರನ್ನು ಚಾಣಕ್ಯ ವಿಷ ಕನ್ಯೆಯರಿಂದ ಸಾಯಿಸಿದನು. ಆತ ಕೆಲವು ಹುಡುಗಿಯರಿಗೆ ಚಿಕ್ಕ ವಯಸ್ಸಿನಿಂದಲೇ ಆಹಾರದಲ್ಲಿ ಸ್ವಲ್ಪಸ್ವಲ್ಪ ವಿಷ ಸೇರಿಸಿ ಅವರನ್ನು ವಿಷ ಕನ್ಯೆಯರನ್ನಾಗಿ ಮಾರ್ಪಾಡಿಸಿದ್ದನು. ಮುಂದಿರುವ ಬಲಿಷ್ಠ ರಾಜನನ್ನು ಸಾಯಿಸಲು ವಿಷಕನ್ಯೆಯರ ಒಂದು ಸಿಹಿಮುತ್ತು ಸಾಕಾಗುತ್ತಿತ್ತು. ಇದಲ್ಲದೆ ಇಂಥ ಅನೇಕ ಕುಟಿಲೋಪಾಯಗಳನ್ನು ಮಾಡಿ ಚಾಣಕ್ಯ ಚಂದ್ರಗುಪ್ತನ ನೇತೃತ್ವದಲ್ಲಿ ಎಲ್ಲ ಗಡಿ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದನು.
ಕೋಪದಲ್ಲಿ ಶತ್ರುವಿನ ಬಗ್ಗೆ ಯೋಚಿಸಿ ಏನು ಪ್ರಯೋಜನವಿಲ್ಲ. ಅದಕ್ಕಾಗಿ ಶಾಂತಚಿತ್ತದಿಂದ ಯೋಚಿಸಿ ಶತ್ರುವನ್ನು ಸದೆಬಡಿಯಲು ಚಾಣಕ್ಯ ಒಂದು ರಣತಂತ್ರವನ್ನು ರೂಪಿಸಿದನು. ಚಾಣಕ್ಯನ ಆಜ್ಞೆಯ ಮೇರೆಗೆ ಸರಿಯಾದ ಸಮಯವನ್ನು ನೋಡಿಕೊಂಡು ಚಂದ್ರಗುಪ್ತ ಮಗಧದ ರಾಜಧಾನಿ ಪಾಟಲೀಪುತ್ರದ ಮೇಲೆ ದಾಳಿ ಮಾಡಿ ಧನನಂದನನ್ನು ಸಾಯಿಸಿದನು. ಅವನ ಸಾವಿನ ನಂತರ ನಂದ ಸಾಮ್ರಾಜ್ಯವನ್ನು ಉರುಳಿಸಿ ಚಂದ್ರಗುಪ್ತ ”ಮೌರ್ಯ” ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ರೀತಿ ಅಖಂಡ ಭಾರತ ಸಾಮ್ರಾಜ್ಯವನ್ನು ಸ್ಥಾಪಿಸಬೇಕು ಎಂಬ ಚಾಣಕ್ಯನ ಕನಸು ನನಸಾಯಿತು. ಅವನಿಗೆ ಧನನಂದನ ಮೇಲಿದ್ದ ಸೇಡು ಸಹ ತೀರಿತು.
ಚಂದ್ರಗುಪ್ತ ಅಖಂಡ ಭಾರತಕ್ಕೆ ಸಾಮ್ರಾಟನಾದಾಗ ಚಾಣಕ್ಯ ಅವನ ಪ್ರಧಾನ ಮಂತ್ರಿಯಾದನು. ಚಾಣಕ್ಯ ಉತ್ತಮ ಆಡಳಿತಕ್ಕಾಗಿ ಒಂದು ಸಮರ್ಥ ಮಂತ್ರಿಮಂಡಲವನ್ನು ರಚಿಸಿದನು. ಎಲ್ಲ ಮಂತ್ರಿಗಳಿಗೆ ಒಂದೊಂದು ಖಾತೆಗಳನ್ನು ನೀಡಿ ಉತ್ತಮ ಆಡಳಿತ ನೀಡಿದನು. ಪ್ರಜೆಗಳ ಏಳ್ಗೆಗಾಗಿ ಸಕಲ ಸೌಲಭ್ಯಗಳನ್ನು ಒದಗಿಸಿದನು. ಚಾಣಕ್ಯ ಚಂದ್ರಗುಪ್ತನಿಗೆ ಅಂಗರಕ್ಷಕರ ಜೊತೆಗೆ ವಿಷಕನ್ಯೆಯರನ್ನು ಅಂಗರಕ್ಷಕಿಯರನ್ನಾಗಿ ನೇಮಿಸಿದನು. ಇತಿಹಾಸದಲ್ಲಿ ಅಂಗರಕ್ಷಕಿಯರನ್ನು ಹೊಂದಿದ ಮೊದಲ ರಾಜನೇ ಚಂದ್ರಗುಪ್ತ ಮೌರ್ಯ. ಚಾಣಕ್ಯ ಚಂದ್ರಗುಪ್ತನ ಜೀವದ ಮೇಲಿನ ಕಾಳಜಿಯಿಂದಾಗಿ ಬಾಲ್ಯದಿಂದಲೂ ಅವನ ಆಹಾರದಲ್ಲಿ ಸ್ವಲ್ಪಸ್ವಲ್ಪ ವಿಷ ಬೆರೆಸುತ್ತಿದ್ದನು. ಈಗಲೂ ಸಹ ಅವನ ಊಟದಲ್ಲಿ ಸ್ವಲ್ಪ ವಿಷ ಬೆರೆಸಲಾಗುತ್ತಿತ್ತು. ಒಂದಿನ ಚಂದ್ರಗುಪ್ತನ ಊಟವನ್ನು ಅವನ ಮಡದಿ ದುರ್ಧರಾ ಸೇವಿಸಿದಳು. ವಿಷಯುಕ್ತ ಆಹಾರವನ್ನು ಸೇವಿಸಿ ದುರ್ಧರಾ ಸಾವಿನ ದವಡೆಗೆ ಸಿಲುಕಿದಳು. ಆ ಸಮಯದಲ್ಲಿ ಆಕೆ ತುಂಬು ಗರ್ಭಿಣಿಯಾಗಿದ್ದಳು. ಅವಳ ಜೊತೆಗೆ ಅವಳ ಹೊಟ್ಟೆಯಲ್ಲಿರುವ ಮಗುವನ್ನು ಕಳೆದುಕೊಳ್ಳುತ್ತೆನಲ್ಲ ಎಂಬ ದು:ಖದಲ್ಲಿ ಮುಳುಗಿದ ಚಂದ್ರಗುಪ್ತನ ಮುಖ ನೋಡಿದ ಚಾಣಕ್ಯ, ಅವಳ ಗರ್ಭವನ್ನು ಕತ್ತರಿಸಿ ಅವಳ ಹೊಟ್ಟೆಯಲ್ಲಿನ ಮಗುವನ್ನು ಹೊರತೆಗೆದನು. ಆ ಮಗುವಿನ ಮೈಗೆ ಹಲವಾರು ರಕ್ತದ ಕಲೆಗಳು ಅಂಟಿಕೊಂಡಿದ್ದವು. ಆದ್ದರಿಂದಲೇ ಆ ಮಗುವಿಗೆ ಬಿಂದುಸಾರ ಎಂದು ಹೆಸರಿಡಲಾಯಿತು.
ಚಂದ್ರಗುಪ್ತನ ನಂತರ ಬಿಂದುಸಾರ ಮೌರ್ಯ ಸಾಮ್ರಾಜ್ಯದ ನೂತನ ಸಾಮ್ರಾಟನಾದನು. ಅವನಿಗೂ ಸಹ ಚಾಣಕ್ಯ ಪ್ರಧಾನ ಮಂತ್ರಿಯಾದನು. ಆದರೆ ವಯಸ್ಸಾದ ಚಾಣಕ್ಯನ ಮೇಲೆ ಮಧ್ಯಮ ವಯಸ್ಸಿನ ಸುಬಂಧುವಿಗೆ ಹೊಟ್ಟೆ ಕಿಚ್ಚಿತ್ತು. ಸುಬಂಧು ಬಿಂದುಸಾರನ ಆಸ್ಥಾನದ ಒಬ್ಬ ಸಾಮಾನ್ಯ ಮಂತ್ರಿಯಾಗಿದ್ದನು. ಅವನಿಗೆ ಪ್ರಧಾನಮಂತ್ರಿಯಾಗುವ ಎಂಬ ಆಸೆಯಿತ್ತು. ಅದಕ್ಕಾಗಿ ಆತ ಚಾಣಕ್ಯನ ಮೇಲೆ ಕತ್ತಿ ಮಸಿಯುತ್ತಿದ್ದನು. ಅದಕ್ಕಾಗಿ ಸುಂಬಂಧು ಒಂದಿನ ಸಮಯ ನೋಡಿಕೊಂಡು ಬಿಂದುಸಾರನಿಗೆ ಅವನ ಜನ್ಮ ವೃತ್ತಾಂತವನ್ನು ತಿಳಿಸಿದನು. ತನ್ನ ತಾಯಿಗೆ ಸಾವಿಗೆ ಚಾಣಕ್ಯನೇ ಕಾರಣ ಎಂಬುದು ಗೊತ್ತಾದಾಗ ಬಿಂದುಸಾರ ಚಾಣಕ್ಯನ ಮೇಲೆ ಕೋಪಗೊಂಡನು. ರಾಜನ ಕೋಪಕ್ಕೆ ತುತ್ತಾಗಿದ್ದರಿಂದ ಮುನಿಸಿಕೊಂಡು ಎಲ್ಲವನ್ನು ತ್ಯಾಗ ಮಾಡಿ ಚಾಣಕ್ಯ ಪಾಟಲೀಪುತ್ರದ ಸಮೀಪದ ಕಾಡನ್ನು ಸೇರಿದನು.
ಕೆಲ ದಿನಗಳ ನಂತರ ಬಿಂದುಸಾರನಿಗೆ ತಾನು ಆಚಾರ್ಯ ಚಾಣಕ್ಯರ ಮೇಲೆ ಕೋಪ ಪ್ರದರ್ಶಿಸಬಾರದಿತ್ತು ಎಂದು ಪಶ್ಚಾತ್ತಾಪವಾಯಿತು. ಆದರೆ ಈಗ ಕಾಲ ಮಿಂಚಿ ಹೋಗಿತ್ತು. ಚಾಣಕ್ಯ ಕಾಡಿನಲ್ಲಿ ಒಂದು ಪುಟ್ಟ ಗುಡಿಸಿನಲ್ಲಿ ಸಂನ್ಯಾಸಿಯಂತೆ ವಾಸಿಸುತ್ತಿದ್ದನು. ಆಗ ಬಿಂದುಸಾರ ಸುಬಂಧುವಿಗೆ ಕಾಡಿಗೆ ಹೋಗಿ ಚಾಣಕ್ಯನ ಮನವೊಲಿಸಿ ಮತ್ತೆ ಅವರನ್ನು ರಾಜ್ಯಕ್ಕೆ ಮರಳಿ ಕರೆತರುವಂತೆ ಆದೇಶ ನೀಡಿ ಕಳುಹಿಸಿದನು. ಆದರೆ ಸುಬಂಧವಿಗೆ ಚಾಣಕ್ಯ ಮರಳಿ ಆಸ್ಥಾನಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕಾಗಿ ಆತ ಕಾಡಿನಲ್ಲಿ ಚಾಣಕ್ಯನಿರುವ ಗುಡಿಸಿಲನ್ನು ಪತ್ತೆ ಹಚ್ಚಿ ಅವನನ್ನು ಅದರಲ್ಲಿ ಜೀವಂತವಾಗಿ ಸುಟ್ಟನು. ಈ ರೀತಿ ಸುಬಂಧವಿನ ಕುಟಿಲತೆಗೆ ಚಾಣಕ್ಯ ಕೊಲೆಯಾದನು.
ಸುಬಂಧು ಉದ್ದೇಶ ಪೂರ್ವಕವಾಗಿ ಚಾಣಕ್ಯನನ್ನು ಕೊಲೆ ಮಾಡಿ ಮರಳಿ ಆಸ್ಥಾನಕ್ಕೆ ಬಂದು ಬಿಂದುಸಾರನಿಗೆ “ಅವಮಾನವನ್ನು ತಾಳಲಾರದೇ ಚಾಣಕ್ಯ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ…” ಎಂಬ ಸುಳ್ಳು ವರದಿಯನ್ನು ತಲುಪಿಸಿದನು. ಧನನಂದನ ಮೇಲಿನ ದ್ವೇಷಕ್ಕೆ ಬೀದಿ ಭೀಕಾರಿಯಂತಿದ್ದ ಚಂದ್ರಗುಪ್ತನನ್ನು ಸಾಮ್ರಾಟನನ್ನಾಗಿ ಮಾಡಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ ಚಾಣಕ್ಯ ಆ ಸಾಮ್ರಾಜ್ಯದವರಿಂದಲೇ ಕೊಲೆಯಾದನು. “ಸೇಡಿಗಾಗಿ ಹೊರಟವನು ಒಂದಲ್ಲ ಒಂದಿನ ಸುಡುಗಾಡು ಸೇರುತ್ತಾನೆ” ಎಂಬ ಮಾತು ಚಾಣಕ್ಯನ ವಿಷಯದಲ್ಲೂ ನಿಜವಾಯಿತು. ಇಂದಿಗೂ ಚಾಣಕ್ಯನ ವಿಚಾರಧಾರೆಗಳು, ನೀತಿಗಳು, ಕುಟಿಲೋಪಾಯಗಳು ಲಕ್ಷಾಂತರ ಮಂದಿಗೆ ಯಶಸ್ಸನ್ನು ತಂದು ಕೊಟ್ಟಿವೆ. ಸದ್ಯಕ್ಕೆ ರಾಜಕಾರಣಿಗಳು ಮತ್ತು ಬ್ಯುಸಿನೆಸಮ್ಯಾನಗಳು ಮಾತ್ರ ಚಾಣಕ್ಯನ ಸೂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮಗೆ ಬೇಕಾಗಿರುವುದನ್ನೆಲ್ಲ ಪಡೆದುಕೊಳ್ಳುತ್ತಿದ್ದಾರೆ. ಇದಿಷ್ಟು ಚಾಣಕ್ಯನ ಜೀವನ ಕಥೆ. ಈ ಕಥೆಯನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಧನ್ಯವಾದಗಳು…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.