1) ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ…
2) ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪವು ಕೂಡಲಸಂಗಮದೇವ…
3) ಭಕ್ತಿ ಇಲ್ಲದ ಬಡವ ನಾನಯ್ಯಾ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿ ಬಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವ…
4) ಮಡಕೆಯ ಮಾಡುವಡೆ ಮಣ್ಣೆ ಮೊದಲು
ತೊಡಿಕೆಯ ಮಾಡುವಡೆ ಹೊನ್ನೇ ಮೊದಲು
ಶಿವಪಥವನರಿವಡೆ ಗುರುಪಥವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು…
5) ನೀರಿಂಗೆ ನೈದಿಲೇ ಶೃಂಗಾರ
ಊರಿಂಗೆ ಆರವೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗನ ಶರಣಗೆ ನೊಸಲ ಶ್ರೀ ವಿಭೂತಿಯೇ ಶೃಂಗಾರ…
6) ಹುತ್ತವ ಬಡಿದರೆ ಉರಗ ಸಾವುದೆ?
ಘೋರತಪವ ಮಾಡಿದರೇನು
ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ ಕೂಡಲಸಂಗಮದೇವ?
7) ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ರ್ತೀಯಾಗಿ ಕೂಡಿದಳು ಮಾಯೆ
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ ನೀವೇ ಬಲ್ಲಿರಿ ಕೂಡಲಸಂಗಮದೇವ…
8) ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದರೆ ನಿಲಬಹುದೆ?
ಏರಿ ನೀರುಂಬಡೆ, ಬೇಲಿ ಹೊಲವ ಮೇವೊಡೆ,
ನಾರಿ ತನ್ನ ಮನೆಯಲ್ಲಿ ಕಳುವೊಡೆ,
ತಾಯ ಮೊಲೆವಾಲು ನಂಜಾಗಿ ಕೊಲುವೊಡೆ
ಇನ್ನಾರಿಗೆ ದೂರವೆನಯ್ಯಾ ಕೂಡಲಸಂಗಮದೇವ?
9) ಬೆಳೆವ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ ಲಿಂಗ ತಂದೆ,
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ…
10) ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ,
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ.
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ,
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ.
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ…
11) ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಟೆಯಿಲ್ಲದ ಭಕ್ತ
ಇದ್ದಡೇನೋ, ಶಿವ ಶಿವಾ ಹೋದಡೇನೋ?
ಕೂಡಲ ಸಂಗಮದೇವನ ಊಡವ ಆವಿಂಗೆ ಉಣ್ಣದ ಕರುವ ಬಿಟ್ಟಂತೆ…
12) ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದು:ಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ…
13) ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತು
ಕೊಂದಹರೆಂಬುದನರಿಯದೆ ಬೆಂದ
ಒಡಲ ಹೊರೆಯ ಹೋಯಿತು ಅಂದದೆ ಹೊಂದಿತು
ಕೊಂದವರುಳಿದರೆ ಕೂಡಲಸಂಗಮದೇವ?
14) ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ ಕೂಡಲಸಂಗಮದೇವ…
15) ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ
ದೂರ ದುರ್ಜನರ ಸಂಗ ಭಂಗವಯ್ಯಾ
ಸಂಗವೆರಡುಂಟು ಒಂದ ಹಿಡಿ, ಒಂದ ಬಿಡು
ಮಂಗಳಮೂರ್ತಿ ನಮ್ಮ ಕೂಡಲಸಂಗಮದೇವನ ಶರಣರ…
16) ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ ಕೂಡಲಸಂಗಮದೇವ…
17) ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲಯ್ಯಾ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲಯ್ಯಾ
ನಾದವ ಮಾಡಿದ ರಾವಣಂಗೆ ಅರೆ ಆಯುಷ್ಯವಾಯಿತು
ವೇದವನೊದಿದ ಬ್ರಹ್ಮನ ಶಿರ ಹೋಯಿತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ…
18) ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ…
19) ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬನ್ನಿಸಬೇಡ ಇದಿರ ಹಳಿಯಲು ಬೇಡ
ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ
ಇದೆ ನಮ್ಮ ಕೂಡಲಸಂಗಮದೇವನೊಲಿಸುವ ಪರಿ…
20) ಕಂಡ ಭಕ್ತರಿಗೆ ಕೈಮುಗಿವಾತನೆ ಭಕ್ತ
ಮೃದು ವಚನ ಸಕಲ ಜಪಂಗಳಯ್ಯಾ
ಮೃದು ವಚನ ಸಕಲ ತಪಂಗಳಯ್ಯಾ
ಸದುವಿನಯವೇ ಸದಾಶಿವನ ಒಲುಮೆಯಯ್ಯಾ
ಕೂಡಲಸಂಗಮದೇವನಂತಲ್ಲನಯ್ಯಾ…
21) ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಮದೇವನಂತಲ್ಲನಯ್ಯಾ…
22) ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ
ಕೂಡಲಸಂಗಮದೇವ ಎನಗಿದೆ ದಿವ್ಯ…
23) ಬ್ರಹ್ಮಪದವಿಯನೊಲ್ಲೇ
ವಿಷ್ಣುಪದವಿಯನೊಲ್ಲೆ
ರುದ್ರಪದವಿಯನೊಲ್ಲೇ
ನಾನು ಮತ್ತಾವಪದವಿಯನೊಲ್ಲೆನಯ್ಯಾ
ಕೂಡಲಸಂಗಮದೇವ ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ…
24) ಚಕೋರಂಗೆ ಚಂದ್ರಮನಾ ಬೆಳಗಿನಾ ಚಿಂತೆ
ಅಂಬುಜಕೆ ಬಾನುವಿನ ಉದಯದಾ ಚಿಂತೆ
ಭ್ರಮರಂಗೆ ಪರಿಮಳದಾ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗಮದೇವರ ನೆನೆವ ಚಿಂತೆ…
25) ಸೂರ್ಯನ ಉದಯ ತಾವರೆಗೆ ಜೀವಾಳ
ಚಂದ್ರಮನುದಯ ನೈದಿಲೆಗೆ ಜೀವಾಳ
ಕೂಪರ ಠಾವಿನಲ್ಲಿ ಕೂಟ ಜೀವಾಳ
ಒಲಿದ ಠಾವಿನಲ್ಲಿ ನೊಟ ಜೀವಾಳವಯ್ಯಾ
ಕೂಡಲಸಂಗಮದೇವನ ಶರಣರ ಬರವೆನೆಗೆ ಪ್ರಾಣ ಜೀವಾಳವಯ್ಯಾ…
26) ಕಾಗೆ ಒಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವನು?
ಕೋಳಿಯೊಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವೆಲ್ಲವನು?
ಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದೊಡೆ ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ?
27) ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯ
ಕೂಡಲಸಂಗಮದೇವ…
28) ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಕಿವಿಯಲ್ಲಿ ನಿಮ್ಮ ಕಿರುತಿ ತುಂಬಿ
ಮನದಲ್ಲಿ ನಿಮ್ಮ ನೆನವು ತುಂಬಿ ಕೂಡಲಸಂಗಮದೇವ
ನಿಮ್ಮ ಚರಣ ಕಮಲದೊಳಗಾನು ತುಂಬಿ…
29) ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುಯೆಂಬ ಬೀಜವಂಕುರುಸಿ
ಲಿಂಗವೆಂಬ ಎಲೆಯಾಯಿತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತು
ಆಚಾರವೆಂಬ ಕಾಯಾಯಿತು
ನಿಷ್ಪತ್ತಿಯೆಂಬ ಹಣ್ಣಾಯಿತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟುಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ…
30) ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ
ಒಬ್ಬನೆ ಕಾಣಿರೋ ಇಬ್ಬರೆಂಬುದು ಹುಸಿನೋಡಾ
ಕೂಡಲಸಂಗಮದೇವನಲ್ಲದೆ ಇಲ್ಲವೆಂದಿತು ವೇದ…
31) ನೀರ ಕಂಡಲ್ಲಿ ಮುಳುಗುವರಯ್ಯಾ
ಮರವ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು ನಿಮ್ಮ ನೆತ್ತ ಬಲ್ಲರಯ್ಯಾ ಕೂಡಲಸಂಗಮದೇವಾ…
32) ಕೊಲುವವನೆ ಮಾದಿಗ
ಹೊಲಸು ತಿಂಬುವವನೆ ಹೊಲೆಯ
ಕುಲವೇನು ಆವಂದಿರ ಕುಲವೇನು
ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ನಮ್ಮ ಕೂಡಲಸಂಗಮದೇವನ ಶರಣರೆ ಕುಲಜರು…
33) ದೇವನೊಬ್ಬ ನಾಮ ಹಲವು
ಪರಮ ಪತಿವ್ರತೆಗೆ ಗಂಡನೊಬ್ಬ
ಮತ್ತೊಂದಕ್ಕೆರಗಿದಡೆ ಕಿವಿ ಮೂಗು ಕೊಯ್ಯುವನು
ಹಲವು ದೈವದ ಎಂಜಲ ತಿಂಬವರನೆಂಬೆ ಕೂಡಲಸಂಗಮದೇವ…
34) ನೂರನೋದಿ ನೂರ ಕೇಳಿದಡೇನು?
ಆಸೆ ಹರಿಯದು, ರೋಷ ಬಿಡದು.
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ…
35) ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತೊಲಿವನಯ್ಯಾ?
36) ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯಾ?
ಎನ್ನ ಕಾಲೆ ಕಂಭ, ದೇಹವೆ ದೇಗುಲ
ಶಿರವೆ ಹೊನ್ನ ಕಲಶವಯ್ಯಾ
ಕೂಡಲಸಂಗಮದೇವಾ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ…
37) ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗಮದೇವನ ಶರಣರ ಅನುಭಾವದಿಂದ ಎನ್ನ ಭವದ ಕೇಡು ನೋಡಯ್ಯಾ…
38) ಕಂಗಳ ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನ ತುಂಬಿದ ಬಳಿಕ ನೆನೆಯಲಿಲ್ಲ
ಮಹಾಂತ ಕೂಡಲಸಂಗಮದೇವನ…
39) ಹಾಡಿದಡೆ ಎನ್ನೊಡೆಯನ ಹಾಡುವೆ
ಬೇಡಿದಡೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರೆಗೊಡ್ಡಿ ಬೇಡುವೆ…
40) ನಂಬರು ನಚ್ಚರು ಬರಿದೆ ಕರೆವರು
ನಂಬಲರಿಯರೀ ಲೋಕದ ಮನುಜರು
ನಂಬಿ ಕರೆದಡೆ ಓ ಎನ್ನನೆ ಶಿವನು?
ನಂಬದೆ ನಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ…
41) ಬಚ್ಚಲ ನೀರು ತಿಳಿಯಾದಡೇನು?
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು?
ಆಕಾಶದ ಮಾವಿನ ಫಲವೆಂದಡೇನು?
ಕೊಯ್ಯಲಿಲ್ಲ ಮೆಲ್ಲಲಿಲ್ಲ
ಕೂಡಲಸಂಗಮದೇವನ ಶರಣರ ಅನುಭಾವವಿಲ್ಲದವರು ಎಲ್ಲಿದ್ದಡೇನು ಎಂತಾದಡೇನು?
42) ಒಲವಿಲ್ಲದ ಪೂಜೆ ನೇಹವಿಲ್ಲದ ಮಾಟ
ಆ ಪೂಜೆಯು ಆ ಮಾಟವು ಚಿತ್ರದ ರೂಹು ಕಾಣಿರಣ್ಣಾ
ಚಿತ್ರದ ಕಬ್ಬು ಕಾಣಿರಣ್ಣಾ
ಅಪ್ಪಿದಡೆ ಸುಖವಿಲ್ಲ ಮೆಲಿದಡೆ ರುಚಿಯಿಲ್ಲ
ಕೂಡಲಸಂಗಮದೇವ ನಿಜವಲ್ಲದವನ ಭಕ್ತಿ…
43) ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ
ನಾಯಿಯ ಹಾಲು ನಾಯಿಮರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ ಕೂಡಲಸಂಗಮದೇವ…
44) ದೇವಲೋಕ ಮೃತ್ಯು ಲೋಕವೆಂಬುದು ಬೇರಿಲ್ಲ ಕಾಣಿರೋ
ಸತ್ಯವ ನುಡಿಯುವುದೆ ದೇವಲೋಕ
ಮಿತ್ಯವ ನುಡಿಯುವುದೆ ಮೃತ್ಯು ಲೋಕ
ಆಚಾರವೇ ಸ್ವರ್ಗ ಅನಾಚಾರವೆ ನರಕ
ಕೂಡಲಸಂಗಮದೇವಾ ನೀವೇ ಪ್ರಮಾಣು…
45) ಜಗದಗಲ ಮುಗಿಲಗಲ ಮಿಗೆಯಗಲ
ನಿಮ್ಮಗಲ ಪಾತಾಳದಿಂದತ್ತ ನಿಮ್ಮ ಶ್ರೀಚರಣ.
ಬ್ರಹ್ಮಾಂಡದಿಂದೆತ್ತ ನಿಮ್ಮ ಶ್ರೀಮುಕುಟ
ಅಪ್ರಮಾಣ ಅಗಮ್ಯ ಅಗೋಚರ ಅಪ್ರತಿಮ
ಲಿಂಗವೆ ಕೂಡಲಸಂಗಮದೇವ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ….
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
STRICT WARNINGContent Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.