ಕಥೆ 1 : ಬೀರಬಲನ ಜಾಣ್ಮೆ ಪರೀಕ್ಷೆ – Akbar Birbal Story 1 in Kannada
ಅಕ್ಬರ್ ಬಾದಷಾ ಒಮ್ಮೆ ಬೀರಬಲನನ್ನು ಯಾವುದೋ ಒಂದು ರಾಜತಾಂತ್ರಿಕ ಕೆಲಸದ ಮೇಲೆ ಅಹ್ಮದನಗರದ ಸುಲ್ತಾನನನ್ನು ಭೇಟಿಯಾಗಲು ಕಳುಹಿಸಿದನು. ಅಕ್ಬರ ಬಾದಷಾರ ಆಪ್ತ, ಪರಮಜ್ಞಾನಿ ತನ್ನನ್ನು ಭೇಟಿಯಾಗಲು ತನ್ನ ಆಸ್ಥಾನಕ್ಕೆ ಬರುತ್ತಾನೆ ಎಂಬ ಸಂದೇಶ ಕೇಳಿ ಅಹ್ಮದನಗರದ ಸುಲ್ತಾನ ಖುಷಿಯಿಂದ ಹೀರಿಹೀರಿ ಹಿಗ್ಗಿದನು. ಈ ಖುಷಿಯ ಜೊತೆಗೆ ಅವನಿಗೆ ಸ್ವಲ್ಪ ಹೊಟ್ಟೆಕಿಚ್ಚು ಸಹ ಆಯಿತು. ಏಕೆಂದರೆ ಬೀರಬಲನ ಪಾಂಡಿತ್ಯ, ಜಾಣ್ಮೆಯ ಬಗ್ಗೆ ಆಗಲೇ ಅಷ್ಟ ದಿಕ್ಕುಗಳಲ್ಲಿ ಮಾತುಗಳಾಗುತ್ತಿದ್ದವು. ಬೀರಬಲನನ್ನು ಮೀರಿಸಬಲ್ಲ ಜಾಣ ಯಾರು ಇಲ್ಲ ಎಂಬ ಮಾತು ಸಹ ಇತ್ತು. ಈಗ ಅಹ್ಮದನಗರದ ಸುಲ್ತಾನನ ತಲೆಯಲ್ಲಿ ಹೇಗಾದರೂ ಮಾಡಿ ಬೀರಬಲನನ್ನು ಪೇಚಿಗೆ ಸಿಲುಕಿಸಿ ನಾನು ಬೀರಬಲನನ್ನು ಸೋಲಿಸಿದೆ, ನಾನು ಬೀರಬಲನಿಗಿಂತ ಮೇಧಾವಿ ಎಂದು ಹೆಸರು ಗಳಿಸುವ ದುರಾಲೋಚನೆ ಮೂಡಿತು. ಅದಕ್ಕಾಗಿ ಆತ ಬೀರಬಲನನ್ನು ಪೇಚಿಗೆ ಸಿಲುಕಿಸಲು ಒಂದು ತಂತ್ರವನ್ನು ಹೆಣೆದನು.
ಬೀರಬಲ ಅಹ್ಮದನಗರಕ್ಕೆ ಬರುತ್ತಿದ್ದಾನೆ ಎಂಬ ಸುದ್ದಿ ಕೇಳಿ ಜನಸಾಗರ ರಾಜ ದರ್ಬಾರಿನ ಕಡೆಗೆ ಹರಿತು ಬಂತು. ಅಹ್ಮದನಗರದ ಸುಲ್ತಾನ ಬೀರಬಲನನ್ನು ಪೇಚಿಗೆ ಸಿಲುಕಿಸಿ ತನ್ನ ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ತನ್ನಂತೆ ಕಾಣುವ ಎಂಟು ಜನ ಸರದಾರರನ್ನು ಆಯ್ಕೆ ಮಾಡಿದನು. ಅವರಿಗೆ ತನ್ನಂತೆ ರಾಜ ಪೋಷಾಕುಗಳನ್ನು ಹಾಕಿಸಿದನು. ಅವರಿಗೂ ಸಹ ಸರಿಸಮನಾದ ಆಸನಗಳನ್ನು ಹಾಕಿಸಿ ತಾನು ಸಹ ಅವರ ಮಧ್ಯೆ ಕುಳಿತುಕೊಂಡನು. ಅಹ್ಮದನಗರದ ಜನರಿಗೆ ಇವರಲ್ಲಿ ನಿಜವಾದ ಸುಲ್ತಾನ ಯಾರು ಎಂಬುದು ತಿಳಿಯದಾಗಿತ್ತು. ಹೀಗಿರುವಾಗ ಬೀರಬಲ ನನ್ನನ್ನು ಈ ಮುಂಚೆ ಒಮ್ಮೆಯೂ ನೋಡಿಲ್ಲ, ಹೀಗಾಗಿ ಆತ ನನ್ನನ್ನು ಗುರ್ತಿಸುವುದಿಲ್ಲ, ನಾನೇ ಗೆಲ್ಲುವೆ ಎಂದು ಸುಲ್ತಾನ ಒಳಗೊಳಗೆ ಖುಷಿಪಡುತ್ತಿದ್ದನು.
ದೆಹಲಿಯಿಂದ ಬೀರಬಲ ಅಹ್ಮದನಗರಕ್ಕೆ ತಲುಪಿದನು. ಅವನನ್ನು ಸಕಲ ರಾಜ ಮರ್ಯಾದೆಗಳೊಂದಿಗೆ, ವಾದ್ಯಗಳ ಸಮೇತ ಕುದುರೆ ಮೇಲೆ ಮೆರವಣಿಗೆ ಮಾಡುತ್ತಾ ರಾಜ ದರ್ಬಾರಿಗೆ ಕರೆತರಲಾಯಿತು. ಜನ ಬೀರಬಲನನ್ನು ನೋಡಿ ಖುಷಿಪಟ್ಟರು. ಆದರೆ ಬೀಲಬಲನಿಗೆ ಈ ಒಂಭತ್ತು ಜನರಲ್ಲಿ ಯಾರು ನಿಜವಾದ ಸುಲ್ತಾನ ಎಂಬುದು ತಿಳಿಯದಾಗಿತ್ತು. ಎಲ್ಲರೂ ಒಂದೇ ತರಹದ ರಾಜಪೋಷಾಕುಗಳನ್ನು ಹಾಕಿಕೊಂಡು ಒಂದೇ ತರಹದ ಆಸನಗಳಲ್ಲಿ ಕುಳಿತಿರುವುದನ್ನು ನೋಡಿ ಅವನಿಗೆ ಇದು ಅಹ್ಮದನಗರದ ಸುಲ್ತಾನ ನನ್ನನ್ನು ಪರೀಕ್ಷಿಸಲು ಮಾಡಿದ ಕೀತಾಪತಿ ಎಂಬುದು ಖಾತ್ರಿಯಾಯಿತು. ಬೀರಬಲನಿಗೆ ಈ ತರಹದ ಪರೀಕ್ಷೆಗಳೇನು ಹೊಸದಾಗಿರಲಿಲ್ಲ. ಆತ ಧೈರ್ಯದಿಂದ ಇದನ್ನು ಎದುರಿಸಲು ಮುಂದಾದನು. ಆತ ಅಲ್ಲಿದ್ದ ಒಂದೇ ತರಹನಾಗಿ ಕಾಣುವ ಒಂಭತ್ತು ಜನರನ್ನು ಒಮ್ಮೆ ದಿಟ್ಟಿಸಿ ನೋಡಿದನು. ಆಗ ಅದರಲ್ಲಿ ಎಂಟು ಜನ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದೆ ತಲೆ ಬಾಗಿಸಿದರು. ಒಬ್ಬ ವ್ಯಕ್ತಿ ಮಾತ್ರ ಬೀರಬಲನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದನು. ಮಿಕ್ಕ ಎಂಟು ಜನ ಸ್ವಲ್ಪ ಹೆದರಿದ್ದರು. ಆದರೆ ಈ ಒಬ್ಬ ವ್ಯಕ್ತಿ ಮಾತ್ರ ಹೆದರದೆ ಬೀರಬಲನನ್ನೇ ನೇರವಾಗಿ ನೋಡುತ್ತಿದ್ದನು. ಈಗ ಬೀರಬಲನಿಗೆ ಯಾರು ಅಹ್ಮದನಗರದ ನಿಜವಾದ ಸುಲ್ತಾನ ಎಂಬುದರ ಸುಳಿವು ಸಿಕ್ಕಿತು. ಅದನ್ನು ಖಾತ್ರಿಪಡಿಸಿಕೊಳ್ಳಲು ಬೀರಬಲ ಒಂದೆರಡು ಹೆಜ್ಜೆ ಮುಂದೆ ನಡೆದು ನಸು ನಗುತ್ತಾ ಎಲ್ಲರೆಡೆಗೆ ಪ್ರೀತಿಯಿಂದ ನೋಡಿದನು. ಆದರೆ ಅಲ್ಲಿದ್ದ ಎಂಟು ಜನ ನಗುವ ಬದಲು ಎಲ್ಲರೂ ಸೇರಿ ಅಲ್ಲಿದ್ದ ಒಬ್ಬನೆಡೆಗೆ ಪದೇಪದೇ ನೋಡುತ್ತಿದ್ದರು. ಇದರಿಂದ ಹೆದರದೆ ನನ್ನೊಂದಿಗೆ ದೃಷ್ಟಿ ತಾಕಿಸಿದ ವ್ಯಕ್ತಿಯೇ ಅಹ್ಮದನಗರದ ನಿಜವಾದ ಸುಲ್ತಾನ ಎಂಬುದು ಖಾತ್ರಿಯಾಯಿತು. ಆಗ ಬೀರಬಲ ಧೈರ್ಯವಾಗಿ ಸುಲ್ತಾನನ ಎದುರು ನಿಂತು ಅವನಿಗೆ ನಮಸ್ಕರಿಸಿ “ನಾನು ದೆಹಲಿಯ ಅಕ್ಬರ್ ಬಾದಷಾರ ಪ್ರತಿನಿಧಿಯಾಗಿ ಬಂದಿರುವೆ” ಎಂದೇಳಿದನು. ತನ್ನ ತಂತ್ರ ವಿಫಲವಾದರೂ ಬೀರಬಲನ ಜಾಣತನವನ್ನು ಮೆಚ್ಚಿ ಸುಲ್ತಾನ ಬೀರಬಲನನ್ನು ಆದರದಿಂದ ಬರಮಾಡಿಕೊಂಡು ಉಚಿತ ಆಸನದಲ್ಲಿ ಕೂಡಿಸಿದನು. ಜನರೆಲ್ಲ ಬೀರಬಲನ ಜಾಣತನವನ್ನು ಕಣ್ಣಾರೆ ಕಂಡು ಮೆಚ್ಚಿ ಅವನಿಗೆ ಜೈಜೈಕಾರ ಹಾಕಿದರು.
ಬಂದ ರಾಜತಾಂತ್ರಿಕ ಕೆಲಸವೆಲ್ಲ ಮುಗಿದ ನಂತರ ಅಹ್ಮದನಗರದ ಸುಲ್ತಾನ ಬೀರಬಲನನ್ನು ವಿಶೇಷ ಔತನಕೂಟಕ್ಕೆ ಕರೆದೋಯ್ದನು. ಆಗ ಸುಲ್ತಾನ ಖಾಸಗಿಯಾಗಿ ಮಾತನಾಡುತ್ತಾ “ಬೀರಬಲರೆ ನೀವು ಅಷ್ಟು ಜನರಲ್ಲಿ ನಾನೇ ಸುಲ್ತಾನ ಅಂತಾ ಹೇಗೆ ಕಂಡು ಹಿಡಿದಿರಿ?” ಅಂತಾ ಕೇಳಿದನು. ಆಗ ಬೀರಬಲ ನಸುನಗುತ್ತಾ “ಸುಲ್ತಾನರೇ ಬೆಂಕಿಯನ್ನು ಬಚ್ಚಿಡಬಹುದೇ? ಮೋಡಗಳಿಂದ ಸೂರ್ಯನನ್ನು ಬಂಧಿಸಬಹುದೆ? ರತ್ನವೂ ಎಲ್ಲಿದ್ದರೂ ಹೊಳೆಯುತ್ತೆ. ನಿಮ್ಮ ಮುಖದಲ್ಲಿನ ರಾಜಕಳೆಯ ತೇಜಸ್ಸಿನಿಂದಲೇ ನಾನು ನೀವೇ ನಿಜವಾದ ಸುಲ್ತಾನ ಎಂಬುದನ್ನು ಪತ್ತೆ ಹಚ್ಚಿದೆ…” ಎಂದೇಳಿದನು. ಆಗ ಅಹ್ಮದನಗರದ ಸುಲ್ತಾನ ಬೀರಬಲನ ಜಾಣತನವನ್ನು ಹೊಗಳುತ್ತಾ ಅವನನ್ನು ವಿಶೇಷ ಔತನಕೂಟಕ್ಕೆ ಕರೆದೋಯ್ದನು…
ಕಥೆ 2 : ಶ್ರೇಷ್ಟರ ಕಿತ್ತಾಟ : Akbar Birbal Story 2 in Kannada
ಅಕ್ಬರ್ ಬಾದಷಾ ತನಗೆ ಸಮಯ ಸಿಕ್ಕಾಗಲೆಲ್ಲ ತನ್ನ ಆಸ್ಥಾನದ ಪಂಡಿತರೊಡನೆ ಏನಾದರೂ ಒಂದನ್ನು ಚರ್ಚಿಸುತ್ತಾ ಕಾಲ ಕಳೆಯುತ್ತಿದ್ದನು. ಹೀಗೆ ಒಂದಿನ ಚರ್ಚೆಯ ವಿಷಯವಾಗಿ “ಮಗು, ಕಾಯಿ ಹಾಗೂ ಹಲ್ಲು… ಇವುಗಳಲ್ಲಿ ಯಾವುವು ಶ್ರೇಷ್ಟವಾಗಿವೆ…?” ಎಂದು ಕೇಳಿದನು. ಆಗ ಆಸ್ಥಾನದ ಪಂಡಿತರು ಉತ್ತರಿಸಲು ಪ್ರಾರಂಭಿಸಿದರು.
ಪಂಡಿತ – ೧ : ಪ್ರಭು, ಮಗುವಿನಲ್ಲಿ ಗಂಡು ಮಗುವೇ ಶ್ರೇಷ್ಟವಾಗಿದೆ. ಏಕೆಂದರೆ ಆ ಗಂಡು ಮಗು ಮುಂದೆ ರಾಜಕುಮಾರನಾಗಿ ಈಡಿ ರಾಜ್ಯದ ರಕ್ಷಣೆ ಮಾಡುತ್ತಾನೆ. ಹೀಗಾಗಿ ಗಂಡು ಮಗುವೇ ಶ್ರೇಷ್ಠ…
ಪಂಡಿತ ೨ : ಪ್ರಭು ಕಾಯಿಗಳಲ್ಲಿ ತೆಂಗಿನಕಾಯಿ ಶ್ರೇಷ್ಟವಾಗಿದೆ. ಅದಕ್ಕಾಗಿಯೇ ಅದನ್ನು ದೇವರ ಪೂಜೆಗೆ ಬಳಸುತ್ತಾರೆ.
ಪಂಡಿತ – ೩ : ಪ್ರಭು ಮನುಷ್ಯರ ಹಲ್ಲುಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಬರುತ್ತವೆ ಹಾಗೇ ಬಿದ್ದು ಹೋಗುತ್ತವೆ. ಬರುವಾಗ ಹೋಗುವಾಗ ನೋವನ್ನುಂಟು ಮಾಡುತ್ತವೆ. ಆದರೆ ಆನೆಯ ಹಲ್ಲು ಹಂಗಲ್ಲ. ಅದು ಆಟಿಕೆಗಳ ತಯಾರಿಕೆಯಲ್ಲಿ, ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ, ದೇವರ ಮೂರ್ತಿ ತಯಾರಿಕೆಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಹೀಗಾಗಿ ಆನೆಯ ಹಲ್ಲು ಶ್ರೇಷ್ಠ ಪ್ರಭು…
ಪಂಡಿತರ ಈ ಸಮಜಾಯಿಷಿ ಉತ್ತರಗಳನ್ನು ಕೇಳುತ್ತಾ ಬೀರಬಲ ಶಾಂತವಾಗಿ ಕುಳಿತಿದ್ದನು. ಅದನ್ನು ಗಮನಿಸಿ ಅಕ್ಬರ್ ಬೀರಬಲನಿಗೆ ತನ್ನ ಉತ್ತರವನ್ನು ಮಂಡಿಸಲು ಆಗ್ರಹಿಸಿದನು. ಆಗ ಬೀರಬಲ “ಪ್ರಭು ಈ ಪಂಡಿತರು ಹೇಳಿದ್ದು ತಪ್ಪು. ಅವರು ಬರೀ ನಿಮ್ಮನ್ನು ಮೆಚ್ಚಿಸಲು ಈ ರೀತಿ ಸುಳ್ಳು ಉತ್ತರ ಕೊಟ್ಟಿದ್ದಾರೆ…” ಎಂದು ನೇರವಾಗಿ ಹೇಳಿದನು. ಸಭೆಯಲ್ಲಿ ಕೋಲಾಹಲ ಶುರುವಾಯಿತು. ಆಗ ಅಕ್ಬರ್ ಬೀರಬಲನಿಗೆ ಸರಿ ಉತ್ತರಗಳನ್ನು ಸಾಕ್ಷ್ಯ ಸಮೇತ ಹೇಳುವಂತೆ ಆದೇಶಿಸಿದನು. ಬೀರಬಲ ನಸುನಗುತ್ತಾ ತನ್ನ ಉತ್ತರಗಳನ್ನು ಮಂಡಿಸಿದನು.
ಬೀರಬಲ : ಪ್ರಭು ಮಗುವಿನಲ್ಲಿ ಗೋಮಾತೆಯ ಮಗ ಬಸವಣ್ಣನೇ ಶ್ರೇಷ್ಟ. ಅವನು ಹೊಲ ಉಳಿದಾಗಲೇ ನಮಗೆ ಅನ್ನ ಸಿಗುವುದು. ಅವನಿಲ್ಲದಿದ್ದರೆ ನಾವೆಲ್ಲರು ಉಪವಾಸ ಸಾಯಬೇಕಾಗುತ್ತಿತ್ತು. ಅವನಿಲ್ಲದಿದ್ದರೆ ಯಾವ ರಾಜ ಯುವರಾಜರು ನಮ್ಮನ್ನು ಹಸಿವಿನಿಂದ ಕಾಪಾಡಲಾರರು. ಅದಕ್ಕಾಗಿ ಮಗುವಿನಲ್ಲಿ ಬಸವಣ್ಣನೇ ಶ್ರೇಷ್ಠ…
ಪ್ರಭು ಕಾಯಿಗಳಲ್ಲಿ ಹತ್ತಿ ಕಾಯಿಯೇ ಶ್ರೇಷ್ಠ. ಏಕೆಂದರೆ ಈ ಹತ್ತಿ ಕಾಯಿ ನೂಲಾಗಿ, ನೂಲು ಬಟ್ಟೆಯಾಗಿ ನಮ್ಮ ಮಾನವನ್ನು ಮುಚ್ಚುತ್ತದೆ, ನಮ್ಮ ಗೌರವವನ್ನು ಕಾಪಾಡುತ್ತದೆ. ಹೀಗಾಗಿ ಹತ್ತಿಕಾಯಿಯೇ ಶ್ರೇಷ್ಠ…
ಇನ್ನೂ ಹಲ್ಲಿನಲ್ಲಿ ನೇಗಿಲ ಹಲ್ಲೇ ಶ್ರೇಷ್ಠ ಪ್ರಭು. ಯಾಕಂತ ನಿಮಗೆ ಗೊತ್ತಾಗಿರಬಹುದು ಈಗಾಗಲೇ…
ಬೀರಬಲನ ಜಾಣ್ಮೆಯ ಉತ್ತರಗಳನ್ನು ಕೇಳಿ ಅಕ್ಬರ್ ಬಾದಷಾ ಖುಷಿಯಾದನು. ಆದರೆ ಅವನಿಗೆ ಬೀರಬಲನನ್ನು ಮತ್ತಷ್ಟು ಪರೀಕ್ಷಿಸುವ ಮನಸ್ಸಾಯಿತು. ಆಗ ಅಕ್ಬರ್ “ರಾಜರಲ್ಲಿ ಶ್ರೇಷ್ಟರಾರು? ಗುಣಗಳಲ್ಲಿ ದೊಡ್ಡ ಗುಣ ಯಾವುದು?” ಎಂದು ಕೇಳಿದನು. ಆಗ ಆಸ್ಥಾನದ ಪಂಡಿತರು ಅಕ್ಬರನನ್ನು ಮೆಚ್ಚಿಸಲು ಮತ್ತೆ ಗೊಳ್ಳು ಉತ್ತರಗಳನ್ನು ನೀಡಿದರು.
ಪಂಡಿತರು : ಪ್ರಭು ಅಖಂಡ ಭಾರತಕ್ಕೆ ಚಕ್ರವರ್ತಿಯಾದ ನೀವೇ ರಾಜರಲ್ಲಿ ಶ್ರೇಷ್ಟರು. ಗುಣಗಳಲ್ಲಿ ವಿದ್ಯೆಯೇ ಶ್ರೇಷ್ಟವಾದದ್ದು.
ಪಂಡಿತರ ಉತ್ತರಗಳನ್ನು ಕೇಳಿ ಬೀರಬಲ ಒಳಗೊಳಗೆ ನಗುತ್ತಿದ್ದನು. ತನ್ನ ಸರದಿ ಬಂದಾಗ ಸರಿಯಾಗಿ ಉತ್ತರಿಸಿದನು.
ಬೀರಬಲ : ಪ್ರಭು ನೀವು ಭಾರತದ ಸಾಮ್ರಾಟರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ರಾಜರಲ್ಲಿ ಮೇಘರಾಜನೇ ಶ್ರೇಷ್ಠ. ಆತ ಮನಸ್ಸು ಮಾಡದಿದ್ದರೆ ಮಳೆಯಾಗಲ್ಲ, ಮಳೆಯಾಗದಿದ್ದರೆ ಬೆಳೆ ಬರಲ್ಲ, ಬೆಳೆ ಬರದಿದ್ದರೆ ರಾಜ್ಯದ ಖಜಾನೆಗಳು ತುಂಬಲ್ಲ. ಎಲ್ಲರೂ ಹಸಿವು ಹಾಗೂ ಬಡತನದಿಂದ ಒದ್ದಾಡಬೇಕಾಗುತ್ತದೆ. ಹೀಗಾಗಿ ಪ್ರಭು ಮೇಘರಾಜನೇ ಶ್ರೇಷ್ಠ. ಪ್ರಭು ಇನ್ನೂ ಗುಣಗಳಲ್ಲಿ ಧೈರ್ಯವೇ ದೊಡ್ಡ ಗುಣ. ಧೈರ್ಯವೊಂದಿದ್ದರೆ ಏನನ್ನಾದರೂ ಗೆಲ್ಲಬಹುದು…
ಬೀರಬಲನ ಸಮಯೋಚಿತ ಸರಿಯಾದ ಉತ್ತರಗಳನ್ನು ಕೇಳಿ ಅಕ್ಬರ್ ಬಾದಷಾ ಪ್ರಸನ್ನನಾಗಿ ಚಪ್ಪಾಳೆ ತಟ್ಟಿದನು. ಅವನಿಗೆ ಶಭಾಸಗಿರಿಯ ಉಡುಗೊರೆಯನ್ನು ಸಹ ಕೊಟ್ಟು ಸತ್ಕರಿಸಿದನು. ಯಾರು ಶ್ರೇಷ್ಟರು? ಎಂಬ ಕದನದಲ್ಲಿ ಬೀರಬಲ ಗೆದ್ದನು. ಪಂಡಿತರು ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಹೋದರು….
ಕಥೆ 3 : ಕಳ್ಳನ ಶೋಧ : Akbar Birbal Story 3 in Kannada
ಒಂದಿನ ಅಕ್ಬರನ ಆಸ್ಥಾನಕ್ಕೆ ಒಂದು ವಿಚಿತ್ರ ಕಳ್ಳತನದ ಕೇಸ್ ಬಂದಿತು. ರಾಜಧಾನಿ ದೆಹಲಿಯ ಪ್ರತಿಷ್ಟಿತ ವ್ಯಾಪಾರಿಯ ಮನೆಯಲ್ಲಿ ಭಾರೀ ಮೊತ್ತದ ಕಳ್ಳತನವಾಗಿತ್ತು. ಮನೆ ಬಾಗಿಲು ಮುರಿಯದೇ, ಗೋಡೆ ಬೀಳಿಸದೆ ಜಾಣತನದಿಂದ ಮನೆಯಲ್ಲಿನ ಹಣವನ್ನು, ಆಭರಣಗಳನ್ನು ಕಳ್ಳತನ ಮಾಡಿದ್ದರು. ಹೇಗಾದರೂ ಮಾಡಿ ಕಳ್ಳರನ್ನು ಪತ್ತೆ ಹಚ್ಚಿ ನನ್ನ ಅಮೂಲ್ಯ ವಸ್ತುಗಳನ್ನು ನನಗೆ ಮರಳಿ ಕೊಡಿ ಎಂದು ಆ ವ್ಯಾಪಾರಿ ಅಕ್ಬರನ ಮುಂದೆ ತನ್ನ ಅಳಲನ್ನು ತೋಡಿಕೊಂಡನು. ಕೂಡಲೇ ಅಕ್ಬರ್ ತನ್ನ ಗೂಢಾಚಾರರಿಗೆ ಕಳ್ಳರನ್ನು ಪತ್ತೆಹಚ್ಚಿ ತರಲು ಆದೇಶ ನೀಡಿದನು. ನಂತರ ಆ ವ್ಯಾಪಾರಿಯನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಿದನು.
ಎರಡು ವಾರ ಕಳೆದರೂ ಗೂಢಾಚಾರರಿಗೆ ಆ ಕಳ್ಳರ ಸುಳಿವು ಸಿಗಲಿಲ್ಲ. ಬಹಳಷ್ಟು ಜಾಣತನದಿಂದ ಆ ಮನೆಯಲ್ಲಿ ಕಳ್ಳತನವಾಗಿತ್ತು. ಆ ವ್ಯಾಪಾರಿ ಮತ್ತೆ ಬಂದು ಅಕ್ಬರನ ಮುಂದೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟನು. ಆಗ ಅಕ್ಬರ ಈ ಕಳ್ಳತನದ ಕೇಸನ್ನು ಬಗೆ ಹರಿಸುವ ಅವಕಾಶವನ್ನು ಬೀರಬಲನಿಗೆ ಕೊಟ್ಟನು. ಆಗ ಬೀರಬಲ ಖುಷಿಯಿಂದ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದನು. ಆ ವ್ಯಾಪಾರಿಗೆ ಹೇಗೆ ಕಳ್ಳತನವಾಗಿದೆ, ಏನೇನು ಕಳ್ಳತನವಾಗಿದೆ ಎಂಬುದನ್ನೆಲ್ಲ ಕೇಳಿದನು. ಆಗ ಅವನಿಗೆ ಯಾರೋ ಮನೆಗೆಲಸದವರೇ ಕನ್ನ ಹಾಕಿದ್ದಾರೆ ಎಂಬುದು ಮನದಟ್ಟಾಯಿತು. ಕೂಡಲೇ ಬೀರಬಲ ಆ ವ್ಯಾಪಾರಿಯ ಮನೆಯಲ್ಲಿ ಕೆಲಸ ಮಾಡುವ ಎಲ್ಲ ಕೆಲಸದಾಳುಗಳನ್ನು ಕರೆ ತರಲು ಹೇಳಿದನು.
ಸೈನಿಕರು ಕೆಲಸದಾಳುಗಳನ್ನು ಕರೆ ತರುವಷ್ಟರಲ್ಲಿ ಬೀರಬಲ ದಾಸೋಹ ಭವನಕ್ಕೆ ಹೋಗಿ ಏಳೆಂಟು ಒಂದೇ ಗಾತ್ರದ ಕಟ್ಟಿಗೆಗಳನ್ನು ತಂದನು. ಸೈನಿಕರು ಮನೆಗೆಲಸದವರನ್ನು ಕರೆ ತಂದರು. ಆಗ ಬೀರಬಲ ಅವರನ್ನೆಲ್ಲ ಶಾಂತಿಯಿಂದ ಮಾತನಾಡಿಸಿದನು. ನಂತರ ಅವರಿಗೆ ಒಂದೊಂದು ಕಟ್ಟಿಗೆಯನ್ನು ಕೊಟ್ಟು “ನಿಮ್ಮಲ್ಲೇ ಒಬ್ಬರು ನಿಮ್ಮ ಯಜಮಾನನ ಮನೆಯಲ್ಲಿ ಕಳ್ಳತನ ಮಾಡಿರುವಿರಿ ಎಂಬುದು ನನಗೆ ಗೊತ್ತಾಗಿದೆ. ಯಾರು ಕಳ್ಳತನ ಮಾಡಿರುವಿರೋ ಅವರ ಕೈಯಲ್ಲಿನ ಕೋಲು ಒಂದು ರಾತ್ರಿಯಲ್ಲಿ ಎರಡು ಅಂಗುಲ ಬೆಳೆಯುತ್ತದೆ. ಇದು ಸಾಮಾನ್ಯ ಕಟ್ಟಿಗೆಯಲ್ಲ. ಕೇರಳದಿಂದ ತರಿಸಿದ ಮಂತ್ರದ ಕೋಲು…” ಎಂದೆಲ್ಲ ಹೇಳಿ ನಾಳೆ ತಪ್ಪದೇ ಆಸ್ಥಾನಕ್ಕೆ ಬರುವಂತೆ ಹೇಳಿ ಅವರನ್ನೆಲ್ಲ ಮನೆಗೆ ಕಳುಹಿಸಿದನು.
ಎಲ್ಲ ಮನೆಗೆಲಸದವರು ನಾವು ಕಳ್ಳತನ ಮಾಡಿಲ್ಲವೇಂದ್ಮೆಲೆ ಈ ಕೋಲು ಬೆಳೆಯುವುದಿಲ್ಲ ಎಂದು ನಿಶ್ಚಿಂತೆಯಿಂದ ಮಲಗಿದರು. ಆದರೆ ನಿಜವಾದ ಕಳ್ಳ ನಿದ್ರೆ ಬಾರದೆ ಬೆವರಲು ಪ್ರಾರಂಭಿಸಿದನು. ಬೀರಬಲ ಬಹಳಷ್ಟು ಬುದ್ಧಿವಂತ. ಅವನು ಹೇಳಿದಂತೆ ಈ ಕೋಲು ಬೆಳೆಯುತ್ತದೆ. ಆಗ ನಾನೇ ಕಳ್ಳ ಅಂತಾ ಅವನಿಗೆ ಗೊತ್ತಾಗುತ್ತದೆ ಅಂತಾ ಆತ ಬೆವರಲು ಪ್ರಾರಂಭಿಸಿದನು. ಆಗ ಅವನಿಗೆ ಒಂದು ಉಪಾಯ ಹೊಳೆಯಿತು. ಆತ ಆ ಕೋಲನ್ನು ಎರಡು ಅಂಗುಲ ಕತ್ತರಿಸಿದನು. ನಾಳೆಯನ್ನುವಷ್ಟರಲ್ಲಿ ಈ ಕೋಲು ಎರಡು ಅಂಗುಲ ಬೆಳೆಯುತ್ತದೆ ಆಗ ಬೀರಬಲನಿಗೆ ಏನು ಗೊತ್ತಾಗಲ್ಲ, ನಾನು ಬಚಾವಾಗುವೆ ಎಂದು ಖುಷಿಯಿಂದ ಆ ಕಳ್ಳ ಕೆಲಸಗಾರ ಮಲಗಿಕೊಂಡನು.
ಮರುದಿನ ಎದ್ದು ಎಲ್ಲ ಕೆಲಸಗಾರರು ಬೀರಬಲ ಕೊಟ್ಟ ಕೋಲುಗಳನ್ನು ತೆಗೆದುಕೊಂಡು ರಾಜ ದರ್ಬಾರಿಗೆ ಹೋದರು. ಆ ಕಳ್ಳ ಸಹ ಹೋದನು. ಆ ವ್ಯಾಪಾರಿ ಬೀರಬಲನ ಮೇಲೆ ಭರವಸೆ ಇಟ್ಟು ನ್ಯಾಯಕ್ಕಾಗಿ ಎದುರು ನೋಡುತ್ತಿದ್ದನು. ಜನರೆಲ್ಲ ಬೀರಬಲನ ಪವಾಡವನ್ನು ನೋಡಲು ಉತ್ಸುಕರಾಗಿದ್ದರು. ಅಷ್ಟರಲ್ಲಿ ಬೀರಬಲ ಬಂದನು. ಎಲ್ಲ ಮನೆಗೆಲಸದವರ ವಿಚಾರಣೆ ಶುರುವಾಯಿತು. ಬೀರಬಲ ತಾನೇ ಖುದ್ದಾಗಿ ಸಾಲಾಗಿ ಒಬ್ಬೊಬ್ಬರ ಕೋಲುಗಳನ್ನು ಸಂಗ್ರಹಿಸಿದನು. ಯಾರ ಕೋಲುಗಳು ಸಹ ಬೆಳೆದಿರಲಿಲ್ಲ. ಆದರೆ ಕೊನೆಯಲ್ಲಿ ಅಡಗಿ ನಿಂತಿದ್ದ ಒಬ್ಬನ ಕೋಲು ಎರಡು ಅಂಗುಲ ಕಿರಿದಾಗಿತ್ತು. ಏಕೆಂದರೆ ಆತ ಅದನ್ನು ಕತ್ತರಿಸಿದ್ದನು. ಕೋಲು ಕಿರಿದಾಗಿದ್ದನ್ನು ನೋಡಿ ಬೀರಬಲನಿಗೆ ಇವನೇ ಕಳ್ಳ ಎಂಬುದು ಖಾತ್ರಿಯಾಯಿತು. ಆಗ ಬೀರಬಲ ಅವನನ್ನು ಗದರಿಸಿದಾಗ ಆ ಕಳ್ಳ ತನ್ನ ತಪ್ಪನ್ನು ಒಪ್ಪಿಕೊಂಡನು. ಕದ್ದ ವಸ್ತುಗಳೆಲ್ಲವನ್ನು ಎಲ್ಲಿಟ್ಟಿರುವೆ ಎಂಬುದನ್ನು ಹೇಳಿದನು. ಕೂಡಲೇ ಸೈನಿಕರು ಅವನನ್ನು ಬಂಧಿಸಿದರು. ಮಿಕ್ಕ ಸೈನಿಕರು ಕಳುವಾದ ವಸ್ತುಗಳನ್ನೆಲ್ಲ ಹುಡುಕಿ ತಂದರು. ಬೀರಬಲನ ಜಾಣತನವನ್ನು ಕಣ್ಣಾರೆ ಕಂಡು ಎಲ್ಲರೂ ಚಪ್ಪಾಳೆ ಬಾರಿಸಲು ಪ್ರಾರಂಭಿಸಿದರು. ಆ ವ್ಯಾಪಾರಿ ತನ್ನ ವಸ್ತುಗಳು ಸಿಕ್ಕ ಖುಷಿಯಲ್ಲಿ ಬೀರಬಲನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಮನೆಗೆ ಹೋದನು….
ಕಥೆ – 4 : ಅಕ್ಬರನ ಅಪಹಾಸ್ಯ : Akbar Birbal Story 4 in Kannada
ಒಂದಿನ ಸಂಜೆ ಅಕ್ಬರ್ ಹಾಗೂ ಬೀರಬಲರಿಬ್ಬರು ವಾಯು ವಿಹಾರಕ್ಕೆ ಹೋಗಿದ್ದರು. ಹಾಗೇ ಮಾತನಾಡುತ್ತಾ ನಡೆಯುತ್ತಾ ಸೂರ್ಯಾಸ್ತವಾಯಿತು. ಬೇಗನೆ ಅರಮನೆ ತಲುಪುವ ಆತುರದಲ್ಲಿ ಅವರಿಬ್ಬರು ಅಡ್ಡದಾರಿ ಹಿಡಿದು ಬೇಗ ಬೇಗನೆ ನಡೆಯಲು ಪ್ರಾರಂಭಿಸಿದರು. ಹೀಗೆ ನಡೆಯುತ್ತಾ ಅವರಿಬ್ಬರು ಒಂದು ತಂಬಾಕಿನ ತೋಟವನ್ನು ತಲುಪಿದರು.
ತಂಬಾಕಿನ ತೋಟವನ್ನು ತಲುಪಿದ ನಂತರ ಅಕ್ಬರನ ಕಣ್ಣಿಗೆ ಎರಡು ಕತ್ತೆಗಳು ಕಾಣಿಸಿದವು. ಅವು ಬೆಳೆದು ನಿಂತ ತಂಬಾಕಿನ ಬೆಳೆಯನ್ನು ತಿನ್ನುವುದನ್ನು ಬಿಟ್ಟು ಬದುವಿಗೆಯಿದ್ದ ಗರಿಕೆ ಹುಲ್ಲನ್ನು ಮೇಯುತ್ತಿದ್ದವು. ಬೀರಬಲನಿಗೆ ಎಲೆ ಅಡಿಕೆಯೊಂದಿಗೆ ತಂಬಾಕು ತಿನ್ನುವ ಚಟವಿತ್ತು. ಈಗ ತಂಬಾಕು ತಿನ್ನದ ಕತ್ತೆಗಳನ್ನು ನೋಡಿ ಅಕ್ಬರ ಬೀರಬಲನನ್ನು ಅಪಹಾಸ್ಯ ಮಾಡಲು ಮುಂದಾದನು. ಕೂಡಲೇ ಅಕ್ಬರ ಆತನಿಗೆ “ನೋಡು ಬೀರಬಲ ಕತ್ತೆಗಳು ಹುಲ್ಲನ್ನು ಮೇಯುತ್ತಿವೆ. ಕತ್ತೆಗಳು ಸಹ ತಿನ್ನದ ತಂಬಾಕನ್ನು ನೀನು ತಿನ್ನುವೆ…” ಎಂದೇಳಿ ಜೋರಾಗಿ ನಗಲು ಪ್ರಾರಂಭಿಸಿದನು. ಆಗ ಬೀರಬಲ “ಪ್ರಭು ಅದು ಹಾಗಲ್ಲ ಈ ತೋಟದ ಮಾಲೀಕರು ಜಾಣರಾಗಿದ್ದಾರೆ, ಜೊತೆಗೆ ಜಿಪುಣರಾಗಿದ್ದಾರೆ. ತಂಬಾಕು ತಿನ್ನದ ಕತ್ತೆಗಳನ್ನಷ್ಟೇ ಈ ತೋಟದೊಳಗೆ ಬಿಡುತ್ತಾರೆ…” ಎಂದೇಳಿ ಸುಮ್ಮನಾದನು. ಅಕ್ಬರನಿಗೆ ಅವನ ಮಾತಿನ ಮರ್ಮ ತಿಳಿಯಿತು. ಜಾಣ ಬೀರಬಲ ನನ್ನನ್ನು ಕತ್ತೆಗೆ ಹೋಲಿಸಿ ಅಪಹಾಸ್ಯ ಮಾಡಿದ್ದು ಅವನಿಗೆ ಅರ್ಥವಾಯಿತು. ಅದಕ್ಕಾತ ಹೆಚ್ಚಿಗೆ ತಲೆ ಉಪಯೋಗಿಸದೇ ಬೀರಬಲನೊಂದಿಗೆ ವೇಗದಿಂದ ಹೆಜ್ಜೆ ಹಾಕುತ್ತಾ ಬೇಗನೆ ಅರಮನೆ ಸೇರಿದನು….
ಕಥೆ – 5 : ಕೈಬಳೆಗಳ ಲೆಕ್ಕ : Akbar Birbal Story 5 in Kannada
ದಿನದಿಂದ ದಿನಕ್ಕೆ ಬೀರಬಲನ ಜಾಣತನದ ಪ್ರಖ್ಯಾತಿ ಭಾರತದಾದ್ಯಂತ ಹಬ್ಬತೊಡಗಿತು. ಅದರ ಜೊತೆಗೆ ಅಕ್ಬರನ ಹೆಸರು ಸಹ ಪ್ರಖ್ಯಾತವಾಗತೊಡಗಿತು. ದಿನಾ ಸಮಯ ಸಿಕ್ಕಾಗಲೆಲ್ಲ ಅಕ್ಬರ್ ಬೀರಬಲನೊಂದಿಗೆ ಹರಟೆ ಹೊಡೆಯುತ್ತಾ ಕೂಡುತ್ತಿದ್ದನು. ಏನಾದರೂ ವಿಚಿತ್ರ ಪ್ರಶ್ನೆ ಕೇಳಿ ಹೇಗಾದರೂ ಮಾಡಿ ಬೀರಬಲನನ್ನು ಮಾತಿನಲ್ಲಿ ಸೋಲಿಸಬೇಕು ಎಂಬ ಮಹದಾಸೆ ಅಕ್ಬರನಿಗೂ ಇತ್ತು. ಅದಕ್ಕಾಗಿಯೇ ಆತ ಬೀರಬಲನಿಗೆ ದಿನಾ ಪ್ರಶ್ನೆಗಳ ಮೂಲಕ ದೊಡ್ಡ ದೊಡ್ಡ ಪರೀಕ್ಷೆಗಳನ್ನು ಇಡುತ್ತಿದ್ದನು. ಆಗ ಬೀರಬಲ ತನ್ನ ತಲೆ ಉಪಯೋಗಿಸಿ ಸಮಯೋಚಿತ ಉತ್ತರ ನೀಡಿ ಬಚಾವಾಗುತ್ತಿದ್ದನು. ಒಂದಿನ ಹೀಗೆ ಆಯಿತು. ಬೀರಬಲನನ್ನು ಮಾತಿನಲ್ಲಿ ಸೋಲಿಸಲು ಅಕ್ಬರ್ ಬಾದಷಾ ಮಾತಿನ ಕದನಕ್ಕೆ ಇಳಿದನು.
ಅಕ್ಬರ್ : ಬೀರಬಲ ನೀನು ಯಾವತ್ತಾದರೂ ಏಕಾಂತದಲ್ಲಿ ನಿನ್ನ ಹೆಂಡತಿಯ ಕೈಯನ್ನು ಹಿಡಿದಿರುವೆಯಾ?
ಬೀರಬಲ : ಹಿಡಿದಿರುವೆ ಪ್ರಭು, ಅದರಲ್ಲೇನು ವಿಶೇಷ ಸಾಹಸವಿದೆ?
ಅಕ್ಬರ್ : ಅವಳ ಕೈಯಲ್ಲಿ ಬಳೆಗಳಿರಬೇಕಲ್ಲ?
ಬೀರಬಲ : ಇವೆ ಪ್ರಭು, ಅವಳ ಕೈಯಲ್ಲಿ ಬಣ್ಣಬಣ್ಣದ ಗಾಜಿನ ಬಳೆಗಳಿವೆ. ಬಳೆಗಳಿಲ್ಲದೆ ಇರಬಲ್ಲಳೇ ಅವಳು…
ಅಕ್ಬರ್ : ನೀನು ದಿನಾ ನಿನ್ನ ಹೆಂಡತಿಯ ಕೈಯನ್ನು ಮುಟ್ಟುವೆ, ಅವಳ ಕೈಬಳೆಗಳನ್ನು ಸಹ ಮುಟ್ಟುವೆ. ಹಾಗಾದರೆ ಅವಳ ಕೈಯಲ್ಲಿ ಎಷ್ಟು ಬಳೆಗಳಿವೆ ಹೇಳು ನೋಡೋಣಾ…
ಅಕ್ಬರನ ಈ ವಿಚಿತ್ರ ಪ್ರಶ್ನೆ ಬೀರಬಲನನ್ನು ಪೇಚಿಗೆ ಸಿಲುಕಿಸಿತು. ದಿನಾ ಗಂಡ ಹೆಂಡತಿಯರು ಕೈಕೈ ಹಿಡಿಯುತ್ತಾರೆ. ಗಂಡ ಹೆಂಡತಿಯ ಕೈಬಳೆಗಳೊಂದಿಗೆ ಆಟವಾಡುತ್ತಾನೆ, ಅವುಗಳ ಸೌಂದರ್ಯವನ್ನು ಹೊಗಳುತ್ತಾನೆ. ಆದರೆ ಅವುಗಳನ್ನ್ಯಾಕೆ ಎಣಿಸುತ್ತಾನೆ? ಒಂದು ವೇಳೆ ಎಣಿಸಿದರೂ ಸಹ ಈಗ ಅಷ್ಟೇ ಬಳೆಗಳು ಇರಲು ಹೇಗೆ ಸಾಧ್ಯ? ಎಂಬೆಲ್ಲ ಗೊಂದಲದಲ್ಲಿ ಬೀರಬಲ ಸಿಲುಕಿದನು. ಆದರೆ ಬೀರಬಲ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವ ವ್ಯಕ್ತಿಯಾಗಿರಲಿಲ್ಲ. ಕೂಡಲೇ ಅವನಿಗೆ ಒಂದು ಉಪಾಯ ಹೊಳೆಯಿತು. ಆತ ಅಕ್ಬರನ ವಿಚಿತ್ರ ಪ್ರಶ್ನೆಯನ್ನು ಮತ್ತೊಂದು ಪ್ರಶ್ನೆಯಿಂದ ಮುಗಿಸಲು ಮುಂದಾದನು.
ಬೀರಬಲ : ಪ್ರಭು ನಿಮ್ಮ ಪ್ರಶ್ನೆಗೆ ಉತ್ತರವಾಗಿ ನಾನೊಂದು ಪ್ರಶ್ನೆ ಕೇಳಬೇಕೆಂದಿರುವೆ. ನಿಮ್ಮ ಅನುಮತಿ ಬೇಕು…
ಅಕ್ಬರ್ : ಕೇಳು ಬೀರಬಲ ಧಾರಾಳವಾಗಿ… (ತನ್ನ ಗಡ್ಡ ಕೆರೆದುಕೊಳ್ಳುತ್ತಾ)
ಬೀರಬಲ : ಪ್ರಭು ನೀವು ಈದೀಗ ನಿಮ್ಮ ಗಡ್ಡ ನೀವಿಸಿಕೊಂಡಿರಿ. ದಿನದಲ್ಲಿ ಕನಿಷ್ಠ ನೂರು ಸಾರಿ ತಮ್ಮ ಗಡ್ಡವನ್ನು ನೀವಿಸಿಕೊಳ್ಳುವಿರಿ. ಕನ್ನಡಿಯಲ್ಲಿ ಗಡ್ಡ ನೋಡಿ ಖುಷಿ ಪಡುವಿರಿ. ಅದನ್ನು ಪದೇಪದೇ ಬಾಚುವಿರಿ. ಹೌದಲ್ಲವೇ?
ಅಕ್ಬರ್ : ಹೌದು ಬೀರಬಲ
ಬೀರಬಲ : ಹಾಗಾದರೆ ಇಲ್ಲೇ ನೀವು ಕೇಳಿದ ಪ್ರಶ್ನೆಗೆ ಉತ್ತರವಿದೆ. ನೀವು ನಿಮ್ಮ ಗಡ್ಡದಲ್ಲಿರುವ ಒಂದೊಂದು ಕೂದಲನ್ನು ಎಣಿಸಿರುವಿರಿ ಎಂದಾಯಿತು. ನಿಮ್ಮ ಗಡ್ಡದ ಸಾವಿರ ಕೂದಲಿಗೆ ನನ್ನ ಹೆಂಡತಿಯ ಒಂದು ಕೈಬಳೆಯಂತೆ ನೀವು ಅವಳ ಒಟ್ಟು ಕೈಬಳೆಗಳನ್ನು ಲೆಕ್ಕ ಹಾಕಬೇಕು…
ಈ ರೀತಿ ಅಕ್ಬರನ ವಿಚಿತ್ರ ಪ್ರಶ್ನೆಗೆ ಬೀರಬಲ ಮತ್ತೊಂದು ಜಾಣ ಪ್ರಶ್ನೆಯಿಂದಲೇ ಉತ್ತರಿಸಿ ಬಚಾವಾದನು. ಅಕ್ಬರನಿಗೆ ಬೀರಬಲನನ್ನು ಮಾತಿನಲ್ಲಿ ಸೋಲಿಸುವುದು ಅಷ್ಟೊಂದು ಸುಲಭವಲ್ಲ ಎಂಬುದು ಮನದಟ್ಟಾಯಿತು. ಆತ ನಸುನಗುತ್ತಾ ಹರಟೆ ಮುಗಿಸಿ ತನ್ನ ಬೇಗಂಳ ಕಡೆಗೆ ಹೋದನು…
ಕಥೆ 6 : ದೇವರು ಕೊಡಲಾರದ ಶಿಕ್ಷೆ : Akbar Birbal Story 6 in Kannada
ಒಂದಿನ ಅಕ್ಬರ್ ಬಾದಷಾ ರಾಜ ದರ್ಬಾರಿಗೆ ಬಂದರೂ ಸಹ ಯಾವುದೇ ಮಹತ್ವಪೂರ್ಣ ಕೆಲಸವನ್ನು ಕೈಗೊತ್ತಿಕೊಳ್ಳಲಿಲ್ಲ. ಎಲ್ಲವನ್ನೂ ನಾಳೆಗೆ ಮುಂದೂಡಿ ಏನನ್ನೋ ಚಿಂತಿಸುತ್ತಾ ಕುಳಿತನು. ಥಟ್ಟನೆ ಅವನ ಮನಸ್ಸಲ್ಲಿ ಒಂದು ವಿಚಿತ್ರ ಪ್ರಶ್ನೆ ಬಂತು. ಅದನ್ನಾತ ತನ್ನ ಆಸ್ಥಾನದ ಪಂಡಿತರ ಮುಂದಿಟ್ಟನು. ಆ ಪ್ರಶ್ನೆ ಏನೆಂದರೆ “ದೇವರಿಗೂ ಕೊಡಲು ಸಾಧ್ಯವಾಗದ ಶಿಕ್ಷೆಯನ್ನು ನಾನು ಅಪರಾಧಿಗೆ ಕೊಡಬಹುದೇ?” ಎಂದಷ್ಟೇ. ಈ ಪ್ರಶ್ನೆ ಕೇಳಿ ಆಸ್ಥಾನದ ಪಂಡಿತರ ಮುಖ ಬಾಡಿತು. ಏಕೆಂದರೆ ಅವರು ಈ ಮುಂಚೆ ಅಕ್ಬರನನ್ನು ಹೊಗಳಿ ಸಿಕ್ಕಾಕೊಂಡು ಮಾನಗೇಡಿಯಾಗಿದ್ದರು. ಅದಕ್ಕಾಗಿ ಈ ಸಲ ಅವರು ಏನು ಹೇಳದೆ ಸುಮ್ಮನಾದರು.
ಅಕ್ಬರನ ಸಹಿತ ಆಸ್ಥಾನದ ಪಂಡಿತರೆಲ್ಲರು ಬೀರಬಲನ ದಾರಿಯನ್ನು ಕಾಯುತ್ತಿದ್ದರು. ಆದರೆ ದಿನಾಲು ಸ್ವಲ್ಪ ತಡವಾಗಿ ಅರಮನೆಗೆ ಬರುವುದು ಬೀರಬಲನ ರೂಢಿಯಾಗಿತ್ತು. ಕೊನೆಗೂ ಬೀರಬಲ ಬಂದನು. ಆಸ್ಥಾನದ ಅರ್ಧ ತಲೆ ಪಂಡಿತರು ಬಚಾವಾದೆವು ಎಂದು ನಿಟ್ಟುಸಿರು ಬಿಟ್ಟರು. ಪಂಡಿತರಿಗೆ ಕೇಳಿದ ಪ್ರಶ್ನೆಯನ್ನೇ ಅಕ್ಬರ್ ಬೀರಬಲನಿಗೆ ಕೇಳಿದನು. ಆಗ ಬೀರಬಲ ಥಟ್ಟನೆ “ದೇವರಿಗೂ ಕೊಡಲಾಗದ ಶಿಕ್ಷೆಯನ್ನು ನೀವು ಕೊಡಬಲ್ಲಿರಿ ಪ್ರಭು…” ಎಂದೇಳಿದಳು. ಬೀರಬಲನ ಈ ಉತ್ತರದಿಂದ ಎಲ್ಲರೂ ಆಶ್ಚರ್ಯಚಕಿತರಾದರು. ಅಕ್ಬರನಿಗೆ ಬೀರಬಲ ನನ್ನನ್ನು ಹೊಗಳುತ್ತಿದ್ದಾನೆ ಎಂದೆನಿಸಿತು. ಈ ಅನುಮಾನವನ್ನು ಬಗೆಹರಿಸಲು ಅಕ್ಬರ್ ಬೀರಬಲನೊಂದಿಗೆ ಮಾತಿಗೀಳಿದನು.
ಅಕ್ಬರ್ : ಬೀರಬಲ ನೀ ನನ್ನನ್ನು ಹೊಗಳುತ್ತಿಲ್ಲ ತಾನೇ?
ಬೀರಬಲ : ಇಲ್ಲ ಪ್ರಭು, ನಾನು ನಿಜ ಹೇಳುತ್ತಿರುವೆ. ದೇವರಿಗೂ ಕೊಡಲಾಗದ ಶಿಕ್ಷೆಯನ್ನು ನೀವು ಕೊಡಬಲ್ಲಿರಿ.
ಅಕ್ಬರ್ : ಹಾಗಾದರೆ ನಾನು ದೇವರಿಗಿಂತ ಶಕ್ತಿಶಾಲಿ ಹಾಗೂ ಶ್ರೇಷ್ಠ ಎಂದಾಯಿತು.
ಬೀರಬಲ : ನನ್ನ ಮಾತಿನರ್ಥ ಅದಲ್ಲ ಪ್ರಭು, ನೀವು ದೇವರಿಗೂ ಕೊಡಲಾಗದ ಶಿಕ್ಷೆಯನ್ನು ಕೊಡಬಲ್ಲಿರಿ. ಆದರೆ ನೀವು ದೇವರಿಗಿಂತ ಶಕ್ತಿವಂತರಲ್ಲ.
ಅಕ್ಬರ್ : ಇದೇನು ಬೀರಬಲ, ನಿನ್ನ ಮಾತು ಒಗಟಾಗಿದೆ. ನಿನ್ನ ಮಾತಲ್ಲಿರುವ ನಿಗೂಢತೆ ನಮ್ಮನ್ನು ಕಾಡುತ್ತಿದೆ.
ಬೀರಬಲ : ಇದರಲ್ಲಿ ನಿಗೂಢವೇನು ಇಲ್ಲ ಪ್ರಭು. ನೀವು ದೇವರಿಗಿಂತ ಚಿಕ್ಕವರು. ಆದರೆ ಆ ದೇವರಿಗೂ ಕೊಡಲಾಗದ ದೊಡ್ಡ ಶಿಕ್ಷೆಯನ್ನು ನೀವು ಕೊಡಬಲ್ಲಿರಿ.
ಅಕ್ಬರ್ : ಕುತೂಹಲ ತಡೆಯಲಾಗುತ್ತಿಲ್ಲ ಬೀರಬಲ, ಆ ಶಿಕ್ಷೆ ಯಾವುದಂತ ಹೇಳಿ ಬಿಡು.
ಬೀರಬಲ : ಸ್ವಲ್ಪ ತಲೆ ಉಪಯೋಗಿಸಿ ಪ್ರಭು, ಆಸ್ಥಾನದ ಯಾರು ಬೇಕಾದರೂ ಹೇಳಬಹುದು. ಹೇಳಿದವರಿಗೆ ನನ್ನ ಕಡೆಯಿಂದ ಉಚಿತ ಬಹುಮಾನ ಕೊಡುವೆ.
(ಅಕ್ಬರನ ಸಮೇತ ಆಸ್ಥಾನದಲ್ಲಿದ್ದ ಎಲ್ಲರೂ ಚಿಂತೆಯಲ್ಲಿ ಮುಳುಗಿದರು. ಆದರೆ ಆ ಶಿಕ್ಷೆ ಯಾವುದಂತಾ ಹೊಳೆಯಲೇ ಇಲ್ಲ. ಕೊನೆಗೆ ಸೋತು ಬೀರಬಲನನ್ನೇ ಕೇಳಿದರು.)
ಅಕ್ಬರ್ : ಬೀರಬಲ ನಾವು ಸೋತೆವು ನೀನೇ ಹೇಳಿಬಿಡು ಅದು ಯಾವ ಶಿಕ್ಷೆ ಅಂತಾ.
ಬೀರಬಲ : ಗಡಿಪಾರು ಶಿಕ್ಷೆ ಪ್ರಭು…
ಅಕ್ಬರ್ : ಅದೇಗೆ?
ಬೀರಬಲ : ಮಹಾಪ್ರಭು ನೀವು ಭಾರತದ ಚಕ್ರವರ್ತಿ, ನೀವು ಮನಸ್ಸು ಮಾಡಿದರೆ ಯಾವುದೇ ಅಪರಾಧಿಯನ್ನು ಗಡಿಪಾರು ಮಾಡಬಹುದು. ಆದರೆ ದೇವರು ಈಡಿ ಜಗತ್ತಿಗೆ ಚಕ್ರವರ್ತಿ. ಜಗತ್ತನ್ನು ದಾಟಿ ಅಪರಾಧಿಯನ್ನು ಕಳುಹಿಸುವುದೆಲ್ಲಿಗೆ? ದೇವರು ಗಡಿಪಾರು ಶಿಕ್ಷೆಯನ್ನು ಕೊಡಲಾರ. ಆದರೆ ನೀವದನ್ನು ಕೊಡಬಲ್ಲಿರಿ…
ಬೀರಬಲನ ಉತ್ತರ ಸರಿಯಾಗಿತ್ತು. ಅದನ್ನು ಕೇಳಿ ಎಲ್ಲರೂ ತಮ್ಮ ತಲೆ ಮೇಲೆ ಕೈಯಿಟ್ಟುಕೊಂಡರು. ಇಷ್ಟು ಸುಲಭವಾದ ಉತ್ತರಕ್ಕೆ ಸೋತೆವಲ್ಲ ಎಂದವರು ಪಶ್ಚಾತ್ತಾಪ ಪಟ್ಟರು. ಬೀರಬಲ ನಸುನಗುತ್ತಾ ರಾಜ ದರ್ಬಾರಿನ ಕೆಲಸಗಳಲ್ಲಿ ಮಗ್ನನಾದನು…
ಕಥೆ – 7 : ಜೋಡು ಕತ್ತೆಯ ಭಾರ : Akbar Birbal Story 7 in Kannada
ಅಕ್ಬರ್ ಬಾದಷಾ ಬಹಳ ದಿನಗಳ ನಂತರ ಬೇಗಂಳೊಂದಿಗೆ ತನ್ನ ಖಾಸಗಿ ಅರಮನೆಗೆ ಹೋದನು. ಅಲ್ಲಿ ಅವಳೊಂದಿಗೆ ಸರಸ ಸಲ್ಲಾಪ ವಿನೋದ ಹರಟೆ ಅಲೆದಾಟಗಳನ್ನೆಲ್ಲ ಮಾಡಿ ದಣಿದನು. ಅಲ್ಲಿ ಬೆಳೆದ ರುಚಿಯಾದ ಹಣ್ಣು ಹಂಪಲುಗಳನ್ನು ತಿಂದು ಆನಂದಿಸಿದನು. ಬೇಗಂ ಅಲ್ಲಿನ ಸರೋವರದಲ್ಲಿ ಅವನೊಂದಿಗೆ ಜಲಕ್ರೀಡೆಯಾಡುವ ಮನದಾಸೆಯನ್ನು ವ್ಯಕ್ತಿಪಡಿಸಿದಳು. ಅಕ್ಬರನೂ ಅದಕ್ಕೆ ಒಪ್ಪಿದನು. ಆದರೆ ಅಲ್ಲಿ ಮಂಗಗಳ ಕಾಟ ಬಹಳಷ್ಟಿತ್ತು. ಅವರ ಬಟ್ಟೆಗಳನ್ನು ನೋಡಿ ಕೊಳ್ಳುವವರಾರು ಎಂಬ ಚಿಂತೆ ಶುರುವಾಯಿತು. ಹಾಗೇ ಇಟ್ಟರೆ ಮಂಗಗಳು ಬಟ್ಟೆ ತೆಗೆದುಕೊಂಡು ಹೋಗುವವು ಇಲ್ಲವೇ ಅವುಗಳೊಂದಿಗೆ ಆಟವಾಡಿ ಹರಿದು ಬೀಸಾಕುವುವು. ಹೀಗಾಗಿ ಅವರು ತಮ್ಮ ಜಲಕ್ರೀಡೆಯ ಆಸೆಯನ್ನು ಬಿಟ್ಟು ಸುಮ್ಮನೆ ಕುಳಿತರು.
ಅಕ್ಬರನ ಖಾಸಗಿ ಅರಮನೆಗೆ ಯಾವುದೇ ಪುರುಷನಿಗೆ ಪ್ರವೇಶವಿರಲಿಲ್ಲ. ಆದರೆ ಬೀರಬಲನಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತಿರಲಿಲ್ಲ. ಏಕೆಂದರೆ ಆತ ಎಲ್ಲ ಬೇಗಂರ ಚಿಕ್ಕಪ್ಪನ ಸ್ಥಾನದ ವಿಶ್ವಾಸವನ್ನು ಗಳಿಸಿಕೊಂಡಿದ್ದನು. ಅಕ್ಬರ್ ಹಾಗೂ ಬೇಗಂ ಇಬ್ಬರು ನಿರಾಸೆಯಲ್ಲಿ ಕುಳಿತಿದ್ದರು. ಅಷ್ಟರಲ್ಲಿ ಬೀರಬಲ ಬಾದಷಾರನ್ನು ಕೂಗುತ್ತಾ ಬಂದನು. ಅವನು ಬರುತ್ತಿದ್ದಂತೆಯೇ ಬಾದಷಾ ಹಾಗೂ ಬೇಗಂರಿಬ್ಬರು ತಮ್ಮ ಬಟ್ಟೆಗಳನ್ನು ಅವನ ಕೈಗೆ ಕೊಟ್ಟು ನೋಡಿಕೊಳ್ಳಲು ಹೇಳಿ ನೀರಿಗೆ ಇಳಿದರು. ಬೀರಬಲ ಅವರ ಬಟ್ಟೆಗಳನ್ನು ಹೊತ್ತುಕೊಂಡು ಒಂದು ಮರದ ನೆರಳಿನಲ್ಲಿ ಹೋಗಿ ಕುಂತನು. ಒಂದು ಗಂಟೆಯ ನಂತರ ಬಾದಷಾ ಬೇಗಂರು ತಮ್ಮ ಬಟ್ಟೆಗಳನ್ನು ತೆಗೆದುಕೊಳ್ಳಲು ಬೀರಬಲನ ಬಳಿ ಬಂದರು. ಅವನು ಅವರ ಬಟ್ಟೆಗಳನ್ನು ಹೊತ್ತುಕೊಂಡು ಕುಳಿತ್ತಿದ್ದನು. ಆಗ ಬಾದಷಾ ತಮ್ಮ ಬಟ್ಟೆಗಳನ್ನು ತೆಗೆದುಕೊಂಡು “ಬೀರಬಲ ಬಟ್ಟೆಗಳು ಭಾರವಾಗಿರಬೇಕಲ್ಲವೇ? ಕತ್ತೆ ಭಾರ ಹೊತ್ತಿರುವೆಯಲ್ಲ…” ಎಂದೇಳಿ ಜೋರಾಗಿ ನಗಲು ಪ್ರಾರಂಭಿಸಿದನು. ಅವನೊಂದಿಗೆ ಬೇಗಂಳು ಸಹ ನಗತೊಡಗಿದಳು. ಇದರಿಂದ ಬೀರಬಲನಿಗೆ ಸ್ವಲ್ಪ ಅಪಮಾನವಾಯಿತು. ಆದರೆ ಆತ ಸುಮ್ಮನಿರುವ ವ್ಯಕ್ತಿಯೇ ಅಲ್ಲ. ಆಗಾತ “ಪ್ರಭು ಒಂದು ಕತ್ತೆ ಭಾರವಲ್ಲ, ಜೋಡು ಕತ್ತೆಗಳ ಭಾರ ಹೊತ್ತಿರುವೆ…” ಎಂದೇಳಿ ತಾನು ಜೋರಾಗಿ ನಗತೊಡಗಿದನು. ಅವರಿಬ್ಬರನ್ನು ಬೀರಬಲ ಕತ್ತೆಗೆ ಹೋಲಿಸಿ ಮುಯ್ಯಿಗೆ ಮುಯ್ಯ ತೀರಿಸಿಕೊಂಡನು. ಆಗ ಬೇಗಂ “ಮಾತಿನಲ್ಲಿ ಬೀರಬಲ ಚಾಚಾರನ್ನು ಗೆಲ್ಲಲಾದಿತೆ?” ಎಂದು ತಮಾಷೆಗೆ ಲಗಾಮಾಕಿದಳು. ನಂತರ ಅವರೆಲ್ಲ ನಗುತ್ತಾ ಅರಮನೆಗೆ ತೆರಳಿದರು…
ಕಥೆ – 8 : ನಾಲ್ಕು ಪ್ರಶ್ನೆಗಳು : Akbar Birbal Story 8 in Kannada
ಒಂದಿನ ಅಕ್ಬರನ ತಲೆಯಲ್ಲಿ ಹೇಗಾದರೂ ಮಾಡಿ ಈ ಬೀರಬಲನನ್ನು ಮಾತಿನಲ್ಲಿ ಇವತ್ತು ಸೋಲಿಸಲೇ ಬೇಕು ಎಂಬ ಹಠ ಹುಟ್ಟಿಕೊಂಡಿತು. ಆಗಾತ ಬಹಳಷ್ಟು ತಲೆ ಉಪಯೋಗಿಸಿ ನಾಲ್ಕು ಪ್ರಶ್ನೆಗಳನ್ನು ತಯಾರು ಮಾಡಿದನು. ವಿಚಿತ್ರವೆಂದರೆ ಆ ನಾಲ್ಕು ಪ್ರಶ್ನೆಗಳಿಗೆ ಒಂದೇ ಉತ್ತರವಿತ್ತು. ಬೀರಬಲ ಬರುತ್ತಿದ್ದಂತೆಯೇ ಈ ನಾಲ್ಕು ಪ್ರಶ್ನೆಗಳ ಬಾಣವನ್ನು ಅವನ ಮೇಲೆ ಪ್ರಯೋಗಿಸಿ ಅವನನ್ನು ಸೋಲಿಸಲು ಬಾದಷಾ ಕಾಯುತ್ತಾ ಕುಳಿತ್ತಿದ್ದನು. ಅಷ್ಟರಲ್ಲಿ ಬೀರಬಲ ಅರಮನೆಗೆ ಬಂದು ಬಾದಷಾಗೆ ನಮಸ್ಕರಿಸಿದನು.
ಅಕ್ಬರ್ : ಬೀರಬಲ ನಿನಗೆ ನೀನು ಮಹಾ ಪಂಡಿತನೆಂದುಕೊಂಡಿರುವೆಯಲ್ಲ. ನಿನಗೊಂದು ಮಹಾ ಪ್ರಶ್ನೆಯಿದೆ.
ಬೀರಬಲ : ಕ್ಷಮಿಸಿ ಮಹಾಪ್ರಭು, ನಾನೇನು ನನ್ನನ್ನು ಮಹಾ ಜ್ಞಾನಿ ಎಂದುಕೊಂಡಿಲ್ಲ. ಜನ ಹಾಗೇ ಕರೆಯುತ್ತಾರೆ ಅಷ್ಟೇ. ಇರಲಿ ನಿಮ್ಮ ಮಹಾಪ್ರಶ್ನೆಯನ್ನು ಕೇಳಿ.
ಅಕ್ಬರ್ : ಎಲೆಗಳು ಏಕೆ ಕೊಳೆಯುತ್ತವೆ? ಕುದುರೆಗಳು ಒಮ್ಮೊಮ್ಮೆ ಏಕೆ ಚೆನ್ನಾಗಿ ನಡೆಯುವುದಿಲ್ಲ? ಬಿತ್ತಿದ ಬೆಳೆ ಚೆನ್ನಾಗಿ ಬರದಿರಲು ಏನು ಕಾರಣ? ಕಲಿತ ವಿದ್ಯೆ ಮರೆತು ಹೋಗುವುದೇಕೆ? ಈ ನಾಲ್ಕು ಪ್ರಶ್ನೆಗಳಿಗೆ ನೀನು ಒಂದೇ ಉತ್ತರ ಕೊಡಬೇಕು. ಇದೇ ನಿನಗಿರುವ ಮಹಾ ಪ್ರಶ್ನೆ…
ಅಕ್ಬರನ ನಾಲ್ಕು ಪ್ರಶ್ನೆಗಳ ಮಹಾ ಸವಾಲನ್ನು ಒಪ್ಪಿಕೊಂಡು ಬೀರಬಲ ಒಂದು ಕ್ಷಣ ವಿಚಾರ ಮಗ್ನನಾದನು. ನಂತರ ಯೋಚಿಸಿ ನಸುನಗುತ್ತಾ “ಮಹಾಪ್ರಭು, ತಿರುವುವಿಕೆ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ. ನಿಮ್ಮ ನಾಲ್ಕು ಪ್ರಶ್ನೆಗಳಿಗೆ ಇದೊಂದೆ ಉತ್ತರ…” ಎಂದೇಳಿದನು. ಆಗ ಅಷ್ಟಕ್ಕೆ ತೃಪ್ತನಾಗದ ಅಕ್ಬರ ಅವನಿಗೆ ಅವನ ಉತ್ತರಕ್ಕೆ ಸ್ಪಷ್ಟೀಕರಣ ಕೊಡುವಂತೆ ಹೇಳಿದನು. ಆಗ ಬೀರಬಲ ನಗುತ್ತಾ ಸ್ಪಷ್ಟೀಕರಣ ನೀಡಿದನು.
ಬೀರಬಲ : ಪ್ರಭು, ದಿನವೂ ಎಲೆಗಳನ್ನು ತಿರುಗಿಸಿ ಹಾಕದಿದ್ದರೆ ಅವು ಕೊಳೆಯಲು ಪ್ರಾರಂಭಿಸುತ್ತವೆ. ಕುದುರೆಯನ್ನು ಆವಾಗಾವಾಗ ಲಗಾಮಿನಿಂದ ತಿರುಗಿಸಿದ್ದರೆ ಅವು ಅಡ್ಡಾದಿಡ್ಡಿ ಓಡುತ್ತವೆ. ಪ್ರತಿ ವರ್ಷ ಹೊಲದ ಮಣ್ಣನ್ನು ನೇಗಿಲು ಹೊಡೆದು ತಿರುಗಿಸದಿದ್ದರೆ ಗರಿಕೆ ಹುಲ್ಲು ಬೆಳೆದು ಬೆಳೆ ಬರದಂತೆ ಮಾಡುತ್ತದೆ. ಇನ್ನೂ ಕಲಿತ ವಿದ್ಯೆಯನ್ನು ಪದೇಪದೇ ಮೆಲುಕು ಹಾಕದಿದ್ದರೆ ಅದು ಮರೆತು ಹೋಗುತ್ತದೆ. ತಿರುವುವಿಕೆ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ. ಇದೇ ನಿಮ್ಮ ನಾಲ್ಕು ಪ್ರಶ್ನೆಗಳಿಗೆ ಸರಿಯಾದ ಉತ್ತರ…
ಬೀರಬಲನ ಉತ್ತರ ಕೇಳಿ ಅಕ್ಬರ್ ಮುಖದ ಮೇಲೆ ಬಿದ್ದಂತೆ ಶಾಂತವಾದನು. ಏಕೆಂದರೆ ಇದು ಸರಿಯಾದ ಉತ್ತರವಾಗಿತ್ತು. ಅಕ್ಬರನ ಅಹಂಕಾರ ಹೆಚ್ಚಾಗುವ ಮುನ್ನವೇ ಕಮ್ಮಿಯಾಯಿತು. ಬೀರಬಲನ ಜಾಣ್ಮೆಯನ್ನು ಮೆಚ್ಚಿಕೊಂಡು ಅಕ್ಬರ್ ಬಾದಷಾ ಖುಷಿಯಿಂದ ಸಭೆಯನ್ನು ಮುಗಿಸಿದನು….
ಕಥೆ – 9 : ಸತ್ಯ ಸುಳ್ಳಿನ ಅಂತರ : Akbar Birbal Story 9 in Kannada
ಒಂದಿನ ಅಕ್ಬರ ಬೀರಬಲರಿಬ್ಬರು ಏಕಾಂತದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಅಕ್ಬರನ ಮನಸ್ಸಲ್ಲಿ ಒಂದು ಪ್ರಶ್ನೆ ಮೂಡಿತು. ಬೀರಬಲನ ಬುದ್ಧಿಮತ್ತೆಯನ್ನು ಪರೀಕ್ಷಿಸುವುದಕ್ಕಾಗಿ ಅಕ್ಬರ ಅವನಿಗೆ ಈ ಪ್ರಶ್ನೆಯನ್ನೇ ಕೇಳಿ ಬಿಟ್ಟನು.
ಅಕ್ಬರ್ : ಸತ್ಯಕ್ಕೂ ಮತ್ತು ಸುಳ್ಳಿಗೂ ಎಷ್ಟು ಅಂತರವಿದೆ?
ಬೀರಬಲ : ಬರೀ ಐದು ಬೆರಳುಗಳ ಅಂತರವಿದೆ ಪ್ರಭು.
ಅಕ್ಬರ್ : ನಿನ್ನ ಮಾತಿನರ್ಥ ನನಗಾಗಲಿಲ್ಲ ಬೀರಬಲ
ಬೀರಬಲ : ಕಣ್ಣಿಗೂ ಕಿವಿಗೂ ಎಷ್ಟು ಅಂತರವಿದೆಯೋ ಅಷ್ಟೇ ಅಂತರ ಸತ್ಯ ಮತ್ತು ಸುಳ್ಳುಗಳ ನಡುವೆ ಇದೆ ಪ್ರಭು.
ಅಕ್ಬರ್ : ಅದೇಗೆ?
ಬೀರಬಲ : ಪ್ರಭು, ಕಣ್ಣಿನಿಂದ ನೋಡಿದ್ದು ಸತ್ಯ ಹಾಗೂ ಕಿವಿಯಿಂದ ಕೇಳಿದ್ದು ಸುಳ್ಳು, ಇಷ್ಟೇ ವ್ಯತ್ಯಾಸ…
ಅಕ್ಬರನಿಗೆ ಬೀರಬಲನ ಉತ್ತರ ಸ್ವಲ್ಪ ತಡವಾಗಿಯಾದರೂ ಅರ್ಥವಾಯಿತು. ಅವನ ಮನಸ್ಸಲ್ಲಿದ್ದ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿತು…
ಕಥೆ – 10 : ಶೂರ ಹುಡುಗಿ : Akbar Birbal Story 10 in Kannada
ಒಂದಿನ ಅಕ್ಬರ ಬೀರಬಲನೊಂದಿಗೆ ವನ ವಿಹಾರಕ್ಕೆ ಹೋಗಿದ್ದನು. ಆಗ ಅವನಿಗೆ ಮತ್ತೆ ಬೀರಬಲನನ್ನು ಪರೀಕ್ಷಿಸುವ ಮನಸ್ಸಾಯಿತು. ಅದಕ್ಕಾತ ಬೀರಬಲನಿಗೆ ಒಂದು ಸವಾಲಿನ ಕೆಲಸವನ್ನು ಒಪ್ಪಿಸಿದನು.
ಅಕ್ಬರ : ಬೀರಬಲ ನಮ್ಮ ದಿಲ್ಲಿಯಲ್ಲಿ ಎಷ್ಟು ಶೂರನೋ ಅಷ್ಟೇ ಹೇಡಿಯಾದ ವ್ಯಕ್ತಿಯನ್ನು ನಿನ್ನಿಂದ ಕರೆತರಲು ಸಾಧ್ಯವೇ?
ಬೀರಬಲ : ಖಂಡಿತ ಸಾಧ್ಯ ಪ್ರಭು.
ಅಕ್ಬರ್ : ಹಾಗಾದರೆ ನಾಳೆಯೇ ಆ ವ್ಯಕ್ತಿಯನ್ನು ಕರೆದುಕೊಂಡು ನನ್ನೆದುರು ಹಾಜರು ಪಡಿಸು…
ಅಕ್ಬರ್ ಬೀರಬಲನಿಗೆ ಈ ಸವಾಲಿನ ಕೆಲಸ ಒಪ್ಪಿಸಿ ಬೇಗಂಳನ್ನು ಭೇಟಿಯಾಗಲು ಹೋದನು. ಆನಂತರ ಬೀರಬಲ ಎಷ್ಟು ಶೂರನೋ ಅಷ್ಟೇ ಹೇಡಿಯಾದ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದನು. ಆತ ಅರಮನೆಯಲ್ಲಿ ಎಷ್ಟು ಹುಡುಕಿದರೂ ಅವನಿಗೆ ಅಂಥ ವಿಚಿತ್ರ ವ್ಯಕ್ತಿ ಸಿಗಲಿಲ್ಲ. ಆತ ತಡರಾತ್ರಿಯ ತನಕ ಹುಡುಕಿ ನಿರಾಶೆಯಿಂದ ಮನೆಗೆ ಹೊರಟಿದ್ದನು. ಆಗ ಅವನ ಕಣ್ಣಿಗೆ ಒಬ್ಬಳು ಸುಂದರವಾದ ಹುಡುಗಿ ಕಾಣಿಸಿದಳು. ಆತ ಅವಳನ್ನು ತಡೆದು ನಿಲ್ಲಿಸಿ “ಮಧ್ಯರಾತ್ರಿ ಒಬ್ಬಳೇ ಎಲ್ಲಿಗೆ ಹೊರಟಿರುವೆ? ನಿನಗೆ ಭಯವಾಗುವುದಿಲ್ಲವೇ?” ಎಂದು ಕೇಳಿದನು. ಆಗವಳು “ಇಲ್ಲ ಬೀರಬಲರೇ ನಾನು ಮನೆಯವರ ಕಣ್ತಪ್ಪಿಸಿ ನನ್ನ ಪ್ರೇಮಿಯನ್ನು ಭೇಟಿಯಾಗಲು ಹೊರಟಿರುವೆ. ಪ್ರೀತಿಯಲ್ಲಿ ಬಿದ್ದ ಮೇಲೆ ಯಾವ ಭಯವೂ ಇಲ್ಲ…” ಎಂದಳು. ಆಗ ಬೀರಬಲನಿಗೆ ಅವಳು ಎಷ್ಟು ಶೂರಳೋ ಅಷ್ಟೇ ಹೇಡಿ ಎಂಬುದು ಅರ್ಥವಾಯಿತು. ಆಗಾತ ಅವಳಿಗೆ ಬಾದಷಾರ ಸವಾಲಿನ ಬಗ್ಗೆ ಹೇಳಿದನು. ನಾಳೆ ನನ್ನ ಜೊತೆಗೆ ಅರಮನೆಗೆ ಬಂದರೆ ಬಹುಮಾನ ಕೊಡುವುದಾಗಿ ಹೇಳಿದನು. ಆ ಹುಡುಗಿ ನಾಳೆ ಅವನೊಂದಿಗೆ ಅರಮನೆಗೆ ಬರಲು ಒಪ್ಪಿದಳು. ಆತ ಅವಳನ್ನು ಅವಳ ಪ್ರಿಯಕರನ ಮನೆಯ ತನಕ ತಲುಪಿಸಿ ಖುಷಿಯಿಂದ ತನ್ನ ಮನೆಗೆ ತೆರಳಿದನು.
ಮಾರನೇ ದಿನ ಬಹುಮಾನದ ಆಸೆಯಿಂದ ಆ ಹುಡುಗಿ ಬೀರಬಲನ ಮನೆಯೆದುರು ಅವನಿಗಾಗಿ ಕಾಯುತ್ತಾ ನಿಂತಿದ್ದಳು. ಬೀರಬಲ ಅವಳನ್ನು ಅರಮನೆಗೆ ಕರೆದುಕೊಂಡೋಗಿ ಅಕ್ಬರನ ಎದುರಿಗೆ ಹಾಜರು ಪಡಿಸಿದನು.
ಬೀರಬಲ : ಪ್ರಭು ನೀವು ಎಷ್ಟು ಶೂರನೋ ಅಷ್ಟೇ ಹೇಡಿಯಾದ ವ್ಯಕ್ತಿಯನ್ನು ಹಾಜರು ಪಡಿಸಲು ಹೇಳಿದ್ದಿರಿ. ಇಲ್ಲಿದ್ದಾಳೆ ಆ ವ್ಯಕ್ತಿ ನೋಡಿ…
(ಅಕ್ಬರ ಆ ಹುಡುಗಿಯನ್ನು ಒಮ್ಮೆ ನೋಡಿ, ಆನಂತರ ಸ್ವಲ್ಪ ಕೋಪದಿಂದ ಬೀರಬಲನೊಂದಿಗೆ ಮಾತಾಡಿದನು)
ಅಕ್ಬರ : ಬೀರಬಲ ನಾನು ನಿನಗೆ ಎಷ್ಟು ಶೂರನೋ ಅಷ್ಟೇ ಹೇಡಿಯಾದ ವ್ಯಕ್ತಿಯನ್ನು ಕರೆತರಲು ಹೇಳಿದ್ದೆ. ಆದರೆ ನೀ ನೋಡಿದರೆ ಯಾವುದೋ ಹುಡುಗಿಯನ್ನು ಕರೆ ತಂದಿರುವೆಯಲ್ಲ…
ಬೀರಬಲ : ನೀವು ತಾಳ್ಮೆಯಿಂದ ಸರಿಯಾಗಿ ಗಮನಿಸಬೇಕು ಪ್ರಭು. ಇವಳು ಎಷ್ಟು ಶೂರಳೋ ಅಷ್ಟೇ ಹೇಡಿಯಾಗಿದ್ದಾಳೆ…
ಅಕ್ಬರ್ : ಅದೇಗೆ?
ಬೀರಬಲ : ಇವಳು ನಿನ್ನೆ ಮಧ್ಯರಾತ್ರಿ ಒಬ್ಬಳೇ ತನ್ನ ಪ್ರಿಯಕರನನ್ನು ಭೇಟಿಯಾಗಲು ಹೊರಟಿದ್ದಳು. ಅಂದ್ಮೇಲೆ ಇವಳು ಶೂರಳಾಗಿದ್ದಾಳೆ. ಆದರೆ ಇವಳು ಮನೆಯಲ್ಲಿರುವ ಹಲ್ಲಿಗೆ ಬಹಳಷ್ಟು ಹೆದರುತ್ತಾಳೆ. ಹೀಗಾಗಿ ಇವಳು ಎಷ್ಟು ಶೂರಳೋ ಅಷ್ಟೇ ಹೇಡಿಯಾಗಿದ್ದಾಳೆ.
ಬೀರಬಲನ ಉತ್ತರದಿಂದ ಅಕ್ಬರ ಬಾದಷಾ ಸಂತುಷ್ಟನಾದನು. ಆ ಹುಡುಗಿಗೆ “ರಾತ್ರಿ ಕದ್ದುಮುಚ್ಚಿ ಪ್ರಿಯತಮನನ್ನು ಭೇಟಿಯಾಗುವ ಅವಶ್ಯಕತೆಯಿಲ್ಲ. ದಿನದಲ್ಲೇ ಭೇಟಿಯಾಗಬಹುದು, ನಿನ್ನ ಪ್ರೀತಿಗೆ ಬಾದಷಾರ ಅಭಯಹಸ್ತವಿದೆ” ಎಂದೇಳಿದನು. ನಂತರ ಬೀರಬಲ ಆ ಹುಡುಗಿಗೆ ಮಾತು ಕೊಟ್ಟಂತೆ ಬಹುಮಾನವನ್ನು ಕೊಟ್ಟು ಕಳುಹಿಸಿದನು. ಅಂತು ಇಂತು ಬಂದ ದೊಡ್ಡ ಸವಾಲಿನಿಂದ ತಪ್ಪಿಸಿಕೊಂಡು ಬೀರಬಲ ದಿನದಿಂದ ದಿನಕ್ಕೆ ತನ್ನ ಜಾಣತನಕ್ಕೆ ಹೆಸರುವಾಸಿಯಾಗುತ್ತಾ ಸಾಗಿದನು….
************************
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.