ತೆನಾಲಿ ರಾಮಕೃಷ್ಣ ತಾನಿಟ್ಟ ಮಹಾ ಮರಣದಂಡನೆ ಪರೀಕ್ಷೆಯಲ್ಲಿ ಉಪಾಯದಿಂದ ಪಾರಾಗಿ ಬಂದಾಗ ಶ್ರೀಕೃಷ್ಣ ದೇವರಾಯನಿಗೆ ಅವನನ್ನು ಆಸ್ಥಾನದ ವಿದ್ವಾಂಸನಾಗಿ ನೇಮಿಸಿದಕ್ಕೆ ಸಾರ್ಥಕವೆನಿಸಿತು. ಅದೇ ಖುಷಿಯಲ್ಲಿ ಆತ ತೆನಾಲಿ ರಾಮಕೃಷ್ಣನ ಮೇಲೆ ಹೆಚ್ಚಿನ ಪ್ರೀತಿ ಅಭಿಮಾನವನ್ನು ತೋರಿದನು. ಆದರೆ ತೆನಾಲಿ ರಾಮಕೃಷ್ಣನಿಗೆ ತಾನು ಆಸ್ಥಾನದ ವಿದ್ವಾಂಸ ಪದವಿಗೆ ಸೂಕ್ತನಾದವನಲ್ಲ ಎಂಬ ಕೊರಗಿತ್ತು. ಅದಕ್ಕಾಗಿ ಆತ ರಾಯನೊಂದಿಗೆ ತನ್ನ ಕೊರಗನ್ನು ಹಂಚಿಕೊಂಡನು.
ಶ್ರೀಕೃಷ್ಣ ದೇವರಾಯ : ರಾಮಕೃಷ್ಣ ನೀನೆಷ್ಟು ಚತುರನೆಂಬುದನ್ನು ನಾನು ನಿನ್ನನ್ನು ನೋಡಿದ ಮೊದಲ ನೋಟದಲ್ಲೇ ಪತ್ತೆ ಹಚ್ಚಿದ್ದೆ. ಆದರೂ ನಿನ್ನನ್ನು ಪರೀಕ್ಷಿಸಬೇಕೆಂದು ಕೆಲವು ಪರೀಕ್ಷೆಗಳನ್ನು ಒಡ್ಡಿದೆ. ನೀನು ಎಲ್ಲದರಲ್ಲೂ ಪಾಸಾದೆ. ನನ್ನ ಲೆಕ್ಕಾಚಾರ ಸುಳ್ಳಾಗಲಿಲ್ಲ. ನೀನು ನಮ್ಮ ಆಸ್ಥಾನದ ವಿದ್ವಾಂಸನಾಗಿರುವುದು ನಮ್ಮ ಅದೃಷ್ಟ…
ತೆನಾಲಿ ರಾಮಕೃಷ್ಣ : ಪ್ರಭು, ನಿಮ್ಮ ಆಶ್ರಯ ಸಿಕ್ಕಿದ್ದರಿಂದ ನನ್ನ ಜೀವನ ಧನ್ಯವಾಗಿದೆ. ಆದರೆ ನಾನೇನು ನಿಮ್ಮ ಆಸ್ಥಾನದ ವಿದ್ವಾಂಸನಾಗುವಷ್ಟು ಬುದ್ಧಿವಂತನಲ್ಲ. ನಾನೊಬ್ಬ ವಿಕಟ ಕವಿ. ನಾನು ಎಲ್ಲರನ್ನು ನಗಿಸಬಲ್ಲ ಕೋಡಂಗಿ ಅಷ್ಟೇ…
ರಾಮಕೃಷ್ಣನ ಪೆದ್ದು ಮಾತಿಗೆ ರಾಯನಿಗೆ ಸ್ವಲ್ಪ ಕೋಪ ಬಂದಿತು.
ಶ್ರೀಕೃಷ್ಣ ದೇವರಾಯ : ನಿನ್ನ ಜಾಣ್ಮೆಯನ್ನು ಮೆಚ್ಚಿಯೇ ನಾವು ನಿನಗೆ ಆಸ್ಥಾನದ ವಿದ್ವಾಂಸನ ಪದವಿಯನ್ನು ಕೊಟ್ಟಿರುವೆವು. ನಿನಗೆ ಆಸ್ಥಾನ ಪಂಡಿತನ ಪದವಿ ಬೇಡವಾದರೆ ನಾಳೆಯಿಂದ ನೀನು ನಮಗೆ ಮುಖ ತೋರಿಸಬೇಡ…
ಇಷ್ಟು ಹೇಳಿ ರಾಯ ವಿಶ್ರಾಂತಿಧಾಮಕ್ಕೆ ತೆರಳಿ ತನ್ನ ಪಟ್ಟದ ರಾಣಿಗೆ ತೆನಾಲಿ ರಾಮಕೃಷ್ಣನ ಜಾಣ್ಮೆಯನ್ನು ವಿವರಿಸಿದನು. ರಾಮಕೃಷ್ಣ ರಾಯನ ಕೋಪವನ್ನು ಹೇಗೆ ಕರಗಿಸುವುದು ಎಂಬ ಚಿಂತೆಯಲ್ಲಿ ಮನೆದಾರಿ ಹಿಡಿದನು.
ಮಾರನೇ ದಿನ ಎಂದಿನಂತೆ ರಾಜಸಭೆ ಆರಂಭವಾಯಿತು. ಎಲ್ಲರೂ ಸಭೆಗೆ ಹಾಜರಿದ್ದರು. ಆದರೆ ತೆನಾಲಿ ರಾಮಕೃಷ್ಣ ಸಭೆಗೆ ಗೈರು ಹಾಜರಾಗಿದ್ದನು. ಶ್ರೀಕೃಷ್ಣ ದೇವರಾಯನ ಕಣ್ಣುಗಳು ಅವನನ್ನೇ ಹುಡುಕಿದವು. ನಿನ್ನೆ ನಾನು ಮುಖ ತೋರಿಸಬೇಡ ಎಂದಿದ್ದಕ್ಕೆ ಮುನಿಸಿಕೊಂಡು ಆತ ಬಂದಿರಕ್ಕಿಲ್ಲವೆಂದು ರಾಯನ ಒಳ ಮನಸ್ಸು ಹೇಳಿತು. ಆದರೆ ರಾಮಕೃಷ್ಣ ಇಷ್ಟು ಸಣ್ಣ ವಿಷಯವನ್ನು ಗಂಭೀರವಾಗಿ ಪರಿಗಣಿಸುವವನಲ್ಲ. ಎಲ್ಲವನ್ನೂ ಹಾಸ್ಯವಾಗಿ ಸ್ವೀಕರಿಸುವ ಪ್ರವೃತ್ತಿ ಅವನದ್ದು ಎಂಬ ಸಮಾಧಾನದ ಮೇಲೆ ರಾಯ ಸಭೆಯ ಕಡೆಗೆ ಗಮನ ಹರಿಸಿದನು. ಅವಶ್ಯಕವಾದ ಎಲ್ಲ ವಿಷಯಗಳು ಸಭೆಯಲ್ಲಿ ಚರ್ಚಿತವಾದವು. ಸಭೆ ಮುಕ್ತಾಯದ ಹಂತಕ್ಕೆ ತಲುಪಿತು. ಆದರೂ ತೆನಾಲಿ ರಾಮಕೃಷ್ಣನ ಸುಳಿವಿಲ್ಲದಿದ್ದರಿಂದ ರಾಯ ಕಳವಳಕ್ಕೊಳಗಾದನು. ಬಹುಷ : ಆತ ನಿನ್ನೆ ನಾನು ಮುಖ ತೋರಿಸಬೇಡ ಎಂದಿದ್ದಕ್ಕೆ ನೊಂದಿರಬೇಕು ಎಂದು ಕೊರಗಿದನು. ಸಭೆ ಮುಕ್ತಾಯವಾಗುತ್ತಿದ್ದಂತೆಯೇ ರಾಯನ ಕಣ್ಣು ಮುಖ್ಯದ್ವಾರದ ಬಳಿ ನಿಂತಿದ್ದ ಓರ್ವ ವಿಚಿತ್ರ ವ್ಯಕ್ತಿಯ ಮೇಲೆ ಬಿದ್ದಿತು. ಕೂಡಲೇ ರಾಯ ಸನ್ನೆ ಮಾಡಿ ಆ ವ್ಯಕ್ತಿಯನ್ನು ಕರೆದನು.
ಆ ವ್ಯಕ್ತಿ ನಿಜಕ್ಕೂ ವಿಚಿತ್ರವಾಗಿದ್ದನು. ಏಕೆಂದರೆ ಮುಖಕ್ಕೆ ಮಣ್ಣಿನ ಮಡಿಕೆಯನ್ನು ಹಾಕಿಕೊಂಡಿದ್ದನು. ಕಣ್ಣು ಮತ್ತು ಬಾಯಿಗಳಿಗಾಗಿ ರಂಧ್ರಗಳನ್ನು ಕೊರೆದ ಮಡಿಕೆ ಅದಾಗಿತ್ತು. ಆತ ಆಸ್ಥಾನದಲ್ಲಿ ನಡೆದು ಬರುವಾಗ ಎಲ್ಲರ ದೃಷ್ಟಿ ಆ ವಿಚಿತ್ರ ವ್ಯಕ್ತಿಯ ಮೇಲೆಯೇ ಇತ್ತು. ಆ ವ್ಯಕ್ತಿ ಸಿಂಹಾಸದ ಮೇಲೆ ವಿರಾಜಮಾನನಾದ ಶ್ರೀಕೃಷ್ಣ ದೇವರಾಯನಿಗೆ ನಮಸ್ಕರಿಸಿ “ರಾಜಾಧಿರಾಜ, ರಾಜ ಮಾರ್ತಾಂಡ, ರಾಜ ಕುಲತೀಲಕ, ಶ್ರೀಶ್ರೀ ಶ್ರೀಕೃಷ್ಣ ದೇವರಾಯರಿಗೆ ಜಯವಾಗಲಿ…” ಎಂದನು. ರಾಯನಿಗೆ ಆ ವಿಚಿತ್ರ ವ್ಯಕ್ತಿಯ ಧ್ವನಿಯನ್ನು ಎಲ್ಲೋ ಕೇಳಿದಂತಾಯಿತು. ಅದಕ್ಕಾಗಿ ಆತ ಅವನನ್ನು ವಿಚಾರಿಸಿದನು.
ಶ್ರೀಕೃಷ್ಣ ದೇವರಾಯ : ಯಾರು ನೀನು? ಏನಿದು ಈ ವಿಚಿತ್ರ ವೇಷ?
ವಿಚಿತ್ರ ವ್ಯಕ್ತಿ : ನಾನು ನಿಮ್ಮ ಆಸ್ಥಾನದ ವಿಕಟಕವಿ.
ಶ್ರೀಕೃಷ್ಣ ದೇವರಾಯ : ನಮ್ಮ ಆಸ್ಥಾನದಲ್ಲಿ ಯಾರು ವಿಕಟ ಕವಿಗಳಿಲ್ಲವಲ್ಲ?.
ವಿಚಿತ್ರ ವ್ಯಕ್ತಿ : ಕ್ಷಮಿಸಿ ಪ್ರಭು, ನಾನು ನಿಮ್ಮ ಆಸ್ಥಾನದ ವಿದ್ವಾಂಸ ತೆನಾಲಿ ರಾಮಕೃಷ್ಣ.
ಶ್ರೀಕೃಷ್ಣ ದೇವರಾಯ : ಏನಿದು ನಿನ್ನ ವಿಚಿತ್ರ ವೇಷ?
ವಿಚಿತ್ರ ವ್ಯಕ್ತಿ : ಪ್ರಭು ನಿನ್ನೆ ನೀವು ಹೇಳಿದ ಆಜ್ಞೆಯನ್ನು ಪಾಲಿಸಲು ಇದೊಂದೆ ದಾರಿಯಿತ್ತು. ಮಣ್ಣಿನ ಮಡಿಕೆಯಾಕಿಕೊಂಡು ನಿಮಗೆ ಮುಖ ತೋರಿಸದೆ ಸಭೆಗೆ ಹಾಜರಾಗಿರುವೆ. ಜೊತೆಗೆ ನಿಮ್ಮಾಜ್ಞೆಯನ್ನು ಸಹ ನೆರವೇರಿಸಿರುವೆ….
ಮುಖಕ್ಕೆ ಮಣ್ಣಿನ ಮಡಿಕೆ ಹಾಕಿಕೊಂಡು ಬಂದಿರುವ ವಿಚಿತ್ರ ವ್ಯಕ್ತಿ ತೆನಾಲಿ ರಾಮಕೃಷ್ಣನೆಂದು ಗೊತ್ತಾದಾಗ ಸಭೆಯಲ್ಲಿ ನಗೆಯ ಕೋಲಾಹಲ ಸೃಷ್ಟಿಯಾಯಿತು. ತೆನಾಲಿ ರಾಮನ ಈ ವಿಚಿತ್ರ ಅವತಾರವನ್ನು ಕಂಡು ಎಲ್ಲರು ನಗಲು ಪ್ರಾರಂಭಿಸಿದರು. ತೆನಾಲಿ ರಾಮಕೃಷ್ಣನ ಹಾಸ್ಯಪ್ರಜ್ಞೆಗೆ ಮನಸೋತ ಶ್ರೀಕೃಷ್ಣ ದೇವರಾಯ ಅವನನ್ನು “ನಿಜವಾದ ವಿಕಟಕವಿ ಎಂದರೆ ನೀನೇ” ಎಂದು ಹೊಗಳಿ ಉಚಿತ ಬಹುಮಾನಗಳೊಂದಿಗೆ ಸನ್ಮಾನಿಸಿದನು. ತೆನಾಲಿ ರಾಮಕೃಷ್ಣ ಹೀಗೆಯೇ ತನ್ನ ಜಾಣ್ಮೆಯನ್ನು ಪ್ರದರ್ಶಿಸುತ್ತಾ, ಎಲ್ಲರನ್ನು ನಗಿಸುತ್ತಾ ಶ್ರೀಕೃಷ್ಣ ದೇವರಾಯನ ಆಸ್ಥಾನದ ಅಮೂಲ್ಯ ಹಾಸ್ಯ ರತ್ನವಾದನು…. To be Continued…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.