ಜಗತ್ತನ್ನು ಗೆಲ್ಲಲು ಹೊರಟ ವೀರ ಅಲೆಕ್ಸಾಂಡರನ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಅಲೆಕ್ಸಾಂಡರ್ ತನ್ನ 13ನೇ ವಯಸ್ಸಿನಲ್ಲಿ ಒಂದು ಕೆರಳಿದ ಕುದುರೆಯನ್ನು ಕಟ್ಟಿಹಾಕಿ ತನ್ನ ತಂದೆಯಿಂದ ಶಬ್ಬಾಷಗಿರಿಯನ್ನು ಪಡೆದುಕೊಂಡನು. ಆವಾಗ ಅವನ ತಂದೆ ಅವನಿಗೆ “ನಿನ್ನ ಶೌರ್ಯಕ್ಕೆ ಈ ಮ್ಯಾಸಿಡೋನಿಯಾ ಸಾಮ್ರಾಜ್ಯ ಸಾಕಾಗುವುದಿಲ್ಲ…” ಎಂದು ಹೇಳಿದರು. ಆ ಕ್ಷಣದಲ್ಲಿ ಅಲೆಕ್ಸಾಂಡರನಿಗೆ “ಹೇಗೆ ಸ್ವರ್ಗದಲ್ಲಿ ಇಬ್ಬರು ಸೂರ್ಯರು ಉದಯಿಸಲು ಸಾಧ್ಯವಿಲ್ಲವೋ ; ಅದೇ ರೀತಿ ಈ ಪೃಥ್ವಿ ಮೇಲೆ ಇಬ್ಬರು ಸಾಮ್ರಾಟರಿರಲು ಸಾಧ್ಯವಿಲ್ಲ. ಒಬ್ಬನೇ ಸಾಮ್ರಾಟನಿರಬೇಕು. ಅದು ನಾನೇ ಆಗಿರಬೇಕು” ಎಂಬಾಸೆ ಹುಟ್ಟಿತು. ಈ ರೀತಿ ಅವನ ಮನಸ್ಸಲ್ಲಿ ಜಗತ್ತನ್ನು ಗೆಲ್ಲಬೇಕು ಎಂಬ ಕನಸು ಮೊಳಕೆವೊಡೆಯಿತು. ಅಲೆಕ್ಸಾಂಡರ್ ಮುಂದೆ ಅರಿಸ್ಟಾಟಲ್‌ನ ಶಿಷ್ಯನಾದಾಗ ಅವನ ಕನಸು ಪಕ್ವವಾಯಿತು.
ಅಲೆಕ್ಸಾಂಡರ್ ತನ್ನ ತಂದೆಯ ನಿಧನದ ನಂತರ 19ನೇ ವಯಸ್ಸಿನಲ್ಲಿಯೇ ಮ್ಯಾಸಿಡೋನಿಯಾದ ರಾಜನಾದನು. ನಂತರ ತನ್ನ 22ನೇ ವಯಸ್ಸಿನಲ್ಲಿ ಮೊದಲ ಯುದ್ಧ ಮಾಡಿ ವಿಜಯಿಯಾದನು. ಹಾಗೆಯೇ ನಿರಂತರವಾಗಿ ಯುದ್ಧಗಳ ಮೇಲೆ ಯುದ್ಧಗಳನ್ನು ಮಾಡುತ್ತಾ ಉತ್ತರ ಭಾರತಕ್ಕೆ ಬಂದನು. ಅವನ ಬಳಿ ಆಧುನಿಕ ನಕ್ಷೆಗಳಿರಲಿಲ್ಲ. ಅದಕ್ಕಾಗಿ ಅವನಿಗೆ ಜಗತ್ತಿನ ವಿಸ್ತಾರದ ಕುರಿತು ಸ್ಪಷ್ಟ ಮಾಹಿತಿ ಇರಲಿಲ್ಲ. ಅವನ ಕಲ್ಪನೆಗಿಂತ ಈ ವಾಸ್ತವಿಕ ಜಗತ್ತು ವಿಶಾಲವಾಗಿತ್ತು. ಮಹಾಸಾಗರವೇ ಜಗತ್ತಿನ ಅಂತ್ಯ ಎಂಬುದು ಅವನ ನಂಬಿಕೆಯಾಗಿತ್ತು.
ಬಹುಪಾಲು ಜಗತ್ತನ್ನು ಗೆದ್ದು ಭಾರತಕ್ಕೆ ಬಂದ ಅಲೆಕ್ಸಾಂಡರ್ ಸ್ವಲ್ಪ ಅಹಂಕಾರಿಯಾಗಿದ್ದನು. ಆತ ಭಾರತವನ್ನು ಒಂದು ಪುಟ್ಟ ದ್ವೀಪವೆಂದು ಭಾವಿಸಿದ್ದನು. ಒಂದಿನ ಅವನಿಗೆ ಒಬ್ಬ ಸಂನ್ಯಾಸಿ ಎದುರಾದನು. ಅದರೆ ಆ ಸಂನ್ಯಾಸಿ ಅಲೆಕ್ಸಾಂಡರನಿಗೆ ಹೆದರಲಿಲ್ಲ. ಜೊತೆಗೆ ಸಲಾಮನ್ನು ಸಹ ಹೊಡೆಯಲಿಲ್ಲ. ಆಗ ಕ್ರೋಧಿತನಾದ ಅಲೆಕ್ಸಾಂಡರ್ ಅವನೊಂದಿಗೆ ಮಾತಿನ ಯುದ್ಧವನ್ನು ಪ್ರಾರಂಭಿಸಿದನು.
ಅಲೆಕ್ಸಾಂಡರ್ : ನಿನಗೆ ನಾನ್ಯಾರೆಂದು ಗೊತ್ತಿಲ್ಲವೇ?
ಸಂನ್ಯಾಸಿ : ಇಲ್ಲ, ಗೊತ್ತಿಲ್ಲ.
ಅಲೆಕ್ಸಾಂಡರ್ : ನಾನು ಅಲೆಕ್ಸಾಂಡರ್…
ಸಂನ್ಯಾಸಿ : ಅಲೆಕ್ಸಾಂಡರ್ ಎಂದರೆ…?
ಅಲೆಕ್ಸಾಂಡರ್ : ನಾನು ಅಲೆಕ್ಸಾಂಡರ್ ದಿ ಗ್ರೇಟ್…
ಸಂನ್ಯಾಸಿ : ಯಾವುದರಲ್ಲಿ ನೀನು ಗ್ರೇಟಾಗಿರುವೆ?
ಅಲೆಕ್ಸಾಂಡರ್ : ನಾನು ಇಡಿ ಜಗತ್ತನ್ನು ಗೆದ್ದು ಗ್ರೇಟಾಗಿರುವೆ. ನಿನಗೆ ನಿಜವಾಗಿಯೂ ನಾನ್ಯಾರೆಂದು ಗೊತ್ತಿಲ್ಲವೇ? ನಿನಗೆ ಏನು ಬೇಕು ಕೇಳು…
ಸಂನ್ಯಾಸಿ : ನೀನೊಂದು ಮರಭೂಮಿಯಲ್ಲಿರುವೆ ಎಂದು ಭಾವಿಸು. ನಿನಗೆ ಈಗ ತೀವ್ರ ಬಾಯಾರಿಕೆಯಾಗಿದೆ. ಸುತ್ತಮುತ್ತ ಎಲ್ಲಿಯೂ ನೀರಿಲ್ಲ. ತಕ್ಷಣ ನೀರು ಕುಡಿಯದಿದ್ದರೆ ನಿನ್ನ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಆವಾಗ ನಾನು ನಿನಗೆ ಅರ್ಧ ಲೋಟ ನೀರಿಗಾಗಿ ನಿನ್ನ ಅರ್ಧ ಸಾಮ್ರಾಜ್ಯ ಕೇಳಿದರೆ ಕೊಡುವೆಯಾ?
ಅಲೆಕ್ಸಾಂಡರ್ : ಹೌದು! ಖಂಡಿತ ಕೊಡುವೆ. ಏಕೆಂದರೆ ನಾನು ಬದುಕಬೇಕು…
ಸಂನ್ಯಾಸಿ : ಒಂದು ವೇಳೆ ನಾನು ಒಂದು ಲೋಟ ನೀರಿಗಾಗಿ ನಿನ್ನ ಸಂಪೂರ್ಣ ಸಾಮ್ರಾಜ್ಯ ಕೇಳಿದರೆ ನೀನು ಕೊಡುವೆಯಾ?
ಅಲೆಕ್ಸಾಂಡರ್ : ಖಂಡಿತ ಕೊಡುವೆ. ನನಗೆ ನನ್ನ ಪ್ರಾಣ ಮುಖ್ಯ…
ಸಂನ್ಯಾಸಿ : ನೀನು ಬರೀ ಒಂದು ಲೋಟ ನೀರಿಗಾಗಿ ಓಡುತ್ತಿರುವೆ. ಸಾಲದಕ್ಕೆ ಬೇರೆಯವರನ್ನು ಓಡಿಸುತ್ತಿರುವೆ ಅಷ್ಟೇ…
(ಸಂನ್ಯಾಸಿ ನಸುನಗುತ್ತಾ ಅಲ್ಲಿಂದ ನಿರ್ಗಮಿಸಿದನು. ಅವನ ಮಾತುಗಳು ಅಲೆಕ್ಸಾಂಡರನನ್ನು ಯೋಚಿಸುವಂತೆ ಮಾಡಿದವು.)
ಉತ್ತರಭಾರತಕ್ಕೆ ಬಂದಿದ್ದ ಅಲೆಕ್ಸಾಂಡರ್ ದಕ್ಷಿಣದಲ್ಲಿರುವ ಮಹಾಸಾಗರವನ್ನು ತಲುಪಿ ತನ್ನ ವಿಶ್ವ ವಿಜಯಯಾನವನ್ನು ಅಂತ್ಯವಾಗಿಸುವ ಉತ್ಸಾಹದಲ್ಲಿದ್ದನು. ಆದರೆ ಅವನಲ್ಲಿರುವ ಉತ್ಸಾಹ ಅವನ ಸೈನಿಕರಲ್ಲಿ ಇರಲಿಲ್ಲ. ಏಕೆಂದರೆ ಅವನ ಸೈನಿಕರು ಸತತ 10 ವರ್ಷಗಳ ಕಾಲ ಯುದ್ಧದಿಂದ ಬಳಲಿದ್ದರು. ಅವರಿಗೆ ದೈಹಿಕ ನೋವಿನ ಜೊತೆಗೆ ಕೆಲವು ಕಾಯಿಲೆಗಳು ಅಂಟಿಕೊಂಡಿದ್ದವು. ಅಲ್ಲದೇ ಅವರಿಗೆ ಭಾರತದ ಉಷ್ಣವಲಯದ ವಾತಾವರಣದ ಪರಿಚಯವಿರಲಿಲ್ಲ. ಭಾರತದ ಅನಿರೀಕ್ಷಿತ ಮಳೆ ಅವರಿಗೆ ತಲೆನೋವಾಗಿತ್ತು. ಅದಕ್ಕಾಗಿ ಅವರು ವ್ಯಾಸ ನದಿಯನ್ನು ದಾಟಲು ಹಿಂದೇಟು ಹಾಕಿದರು. ಭಾರತಕ್ಕೆ ಬಂದ ಮೇಲೆ ಅಲೆಕ್ಸಾಂಡರನಿಗೆ “ಭಾರತ ಪುಟ್ಟ ದೇಶವಲ್ಲ. ಭಾರತ ನನ್ನ ಕಲ್ಪನೆಗಿಂತಲೂ ವಿಶಾಲವಾಗಿದೆ” ಎಂಬ ಸತ್ಯ ಅರಿವಾಗಿತ್ತು. ಅಲ್ಲದೆ ಅವನಿಗೆ ಗಂಗಾ ನದಿ ತಟದಲ್ಲಿರುವ ಬಲಿಷ್ಟ ನಂದ ಸಾಮ್ರಾಜ್ಯದ ಕಲ್ಪನೆಯಿತ್ತು. ಅಷ್ಟರಲ್ಲಿ ಪೋರಸನ ವಿಶ್ವಾಸದ್ರೋಹ ಅವನ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಅದಕ್ಕಾಗಿ ಅಲೆಕ್ಸಾಂಡರ್ ಯುದ್ಧ ನಿಲ್ಲಿಸಿ ಗ್ರೀಸಗೆ ಮರಳಿದನು.
ಗ್ರೀಸಗೆ ಮರಳಿದ ನಂತರ ಅಲೆಕ್ಸಾಂಡರ್ ಕಾಯಿಲೆಯಿಂದ ಬಳಲಿ ಹಾಸಿಗೆ ಹಿಡಿದನು. ಅವನಿಗೆ ತನ್ನ ತಾಯಿಯನ್ನು ನೋಡಬೇಕು ಎಂಬಾಸೆಯಿತ್ತು. ಆದರೆ ಅವನಿಗೆ ಅವನ ಸಾವು ಸಮೀಪಿಸುತ್ತಿರುವುದು ಗೊತ್ತಾಗಿತ್ತು. ನನ್ನನ್ನು ಸಾವಿನ ದವಡೆಯಿಂದ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯ ಅವನಿಗೆ ಮನದಟ್ಟಾಯಿತು. ಅದಕ್ಕಾಗಿ ಆತ ತನ್ನ ಆರ್ಮಿ ಜನರಲನನ್ನು ಕರೆಯಿಸಿ 3 ಬೇಡಿಕೆಗಳನ್ನು ಅವನ ಮುಂದಿಟ್ಟನು.
ಅಲೆಕ್ಸಾಂಡರ್ : ಮೊದಲನೆಯದಾಗಿ ನನಗೆ ಚಿಕಿತ್ಸೆ ನೀಡಿದ ವೈದ್ಯರೇ ನನ್ನ ಹೆಣವನ್ನು ಸ್ಮಶಾನದ ತನಕ ಹೊತ್ತುಕೊಂಡು ಹೋಗಬೇಕು. ಎರಡನೆಯದಾಗಿ ನಾನು ಯುದ್ಧ ಮಾಡಿ ಸಂಪಾದಿಸಿದ ಮುತ್ತುರತ್ನ ವಜ್ರವೈಢೂರ್ಯಗಳನ್ನು ನನ್ನ ಶವದ ಮೇಲೆ ಚೆಲ್ಲಬೇಕು. ಕೊನೆಯದಾಗಿ ನನ್ನ ಎರಡು ಕೈಗಳನ್ನು ಆಗಸದ ಕಡೆಗೆ ಮುಖಮಾಡಿ ನನ್ನನ್ನು ಸಮಾಧಿ ಮಾಡಬೇಕು…
ಆರ್ಮಿ ಜನರಲ್ : ನಿಮ್ಮ ಈ ಮೂರು ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ಆದರೆ ಈ ವಿಚಿತ್ರ ಬೇಡಿಕೆಗಳಿಗೆ ಕಾರಣವೇನೆಂಬುದನ್ನು ನಾವು ತಿಳಿದುಕೊಳ್ಳಬಹುದೇ?
ಅಲೆಕ್ಸಾಂಡರ್ : ಜಗತ್ತಿನ ಶ್ರೇಷ್ಠ ವೈದ್ಯರು ನನಗೆ ಚಿಕಿತ್ಸೆ ನೀಡಿದರೂ ನನ್ನನ್ನು ಸಾವಿನ ದವಡೆಯಿಂದ ಕಾಪಾಡಲು ಸಾಧ್ಯವಾಗಲಿಲ್ಲ. ವೈದ್ಯರ ಸಮೇತ ಯಾರು ನಮ್ಮನ್ನು ಸಾವಿನ ದವಡೆಯಿಂದ ರಕ್ಷಿಸಲಾರರು. ವೈದ್ಯರು ನಮ್ಮ ಜೀವನವನ್ನು ನಿಭಾಯಿಸಬಲ್ಲರು. ಆದರೆ ಅವರಿಗೆ ಜೀವ ಕೊಡುವ ಸಾಮರ್ಥ್ಯವಿಲ್ಲ. ನಾನು ಯುದ್ಧ ಮಾಡಿ ಗಳಿಸಿದ ಮುತ್ತುರತ್ನ ಸಂಪತ್ತೆಲ್ಲ ನಾನು ಸಾಯೋವಾಗ ನನ್ನ ಪ್ರಯೋಜನಕ್ಕೆ ಬರಲಿಲ್ಲ. ನಾವು ಪ್ರೀತಿಯಿಂದ ಗಳಿಸಿದ್ದಷ್ಟೇ ಕಡೆತನಕ ಜೊತೆಗಿರುವುದು. ಬರಿಗೈಯಲ್ಲಿ ಬಂದ ನಾನು ಇಡಿ ಜಗತ್ತನ್ನೇ ಗೆದ್ದರೂ ಬರಿಗೈಯಲ್ಲಿ ಹೋಗುತ್ತಿರುವೆ ಎಂಬ ಸತ್ಯ ಎಲ್ಲರಿಗೂ ಗೊತ್ತಾಗಲಿ….
ಈ ಅಮೂಲ್ಯ ಜೀವನ ಸಂದೇಶವನ್ನು ನೀಡಿ ಅಲೆಕ್ಸಾಂಡರ್ ಕಣ್ಮುಚ್ಚಿದನು. ಧೈರ್ಯ ಸಾಹಸದಿಂದ ಹೋರಾಡುವುದನ್ನು ಕಲಿಸಿದ ಅಲೆಕ್ಸಾಂಡರ್ ಸಾಯೋವಾಗ ಪ್ರೀತಿಯಿಂದ ಬಾಳಿ ಬದುಕುವುದನ್ನು ಸಹ ಕಲಿಸಿ ಹೋಗಿರುವನು. ನಾವು ಸಹ ಅಲೆಕ್ಸಾಂಡರನಂತೆ ಒಂದು ಲೋಟ ನೀರಿಗಾಗಿ ಓಡುತ್ತಿದ್ದೇವೆ. ಮುಂಜಾನೆ 4-ರಿಂದ ಮಧ್ಯರಾತ್ರಿ 12 ದಾಟಿದರೂ ಹಾಗೆಯೇ ಓಡುತ್ತಲೇ ಇರುತ್ತೇವೆ. ಹೆಚ್ಚಿನ ಹಣಕ್ಕಾಗಿ ಆರೋಗ್ಯವನ್ನು ಕೆಡಿಸಿಕೊಂಡು ಜೀವಂತ ಹೆಣವಾಗುತ್ತಿದ್ದೇವೆ. ಸಂಪತ್ತಿನ ಆಸೆಯಿಂದಾಗಿ ನಮ್ಮನ್ನು ಪ್ರೀತಿಸುವ ಬಾಳಸಂಗಾತಿಯನ್ನು ದೂರ ತಳ್ಳುತ್ತಿದ್ದೇವೆ. ನೀರಿಗಿಂತ ಹೆಚ್ಚಾಗಿ ಔಷಧಿಗಳನ್ನು ಕುಡಿಯುತ್ತಿದ್ದೇವೆ. ಅನ್ನಕ್ಕಿಂತ ಹೆಚ್ಚಾಗಿ ಮಾತ್ರೆಗಳನ್ನು ತಿನ್ನುತ್ತಿದ್ದೇವೆ. ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗುವ ನಮಗೆ ಇಂಥ ಜೀವನ ಬೇಕಾ? ಜೀವನ ಸಾಗಿಸಲು ದುಡ್ಡು ಬೇಕು. ಆದರೆ ದುಡ್ಡೇ ಜೀವನವಲ್ಲ…
ನೀವು ಜಗತ್ತನ್ನು ಗೆಲ್ಲುವ ಅವಶ್ಯಕತೆಯಿಲ್ಲ. ಆದರೆ ನಿಮಗೆ ನಿಮ್ಮ ಸಂಗಾತಿಗಳ ಮನಸ್ಸನ್ನು ಗೆಲ್ಲುವ ಅನಿವಾರ್ಯತೆ ಇದೆ. ದ್ವೇಷದಿಂದ ಗೆದ್ದಿದ್ದು ದೇಹದ ಜೊತೆಗೆ ಮಣ್ಣಾಗುತ್ತದೆ. ಪ್ರೀತಿಯಿಂದ ಗೆದ್ದಿದ್ದು ಅಮರವಾಗಿರುತ್ತದೆ. ಸಾಧ್ಯವಾದರೆ ನಿಮ್ಮ ಸಂಗಾತಿಯನ್ನು ಪ್ರೀತಿಸಿ, ಯಾವುದೇ ಕೊರತೆಯಾಗದಂತೆ ಚೆನ್ನಾಗಿ ನೋಡಿಕೊಳ್ಳಿ… ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ ಮಾಡಿ…
Note : Story source is Internet and YouTube.
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.