ಮನುಷ್ಯನಲ್ಲಿ ದುರ್ಗುಣಗಳು ಇರಬಾರದು ಅಂತ ಎಲ್ಲರೂ ಹೇಳುತ್ತಾರೆ. ಆದರೆ ಮನುಷ್ಯನಿಗೆ ಕೆಲವು ದುರ್ಗುಣಗಳು ಇರಲೇಬೇಕು ಎಂದು ನಾನು ವಾದಿಸುತ್ತೇನೆ. ಎಲ್ಲ ಒಳ್ಳೇ ವಿಷಯಗಳು ಒಳ್ಳೆವಲ್ಲ, ಅವು ಪ್ರಯೋಜನಕ್ಕೂ ಬರುವುದಿಲ್ಲ. ಎಲ್ಲ ಕೆಟ್ಟ ವಿಷಯಗಳು ಕೆಟ್ಟವಲ್ಲ. ಸಜ್ಜನನಾದಷ್ಟು ಸಂಕಷ್ಟಗಳು ನಮ್ಮೆದೆಯ ಮೇಲೆ ರುದ್ರ ತಾಂಡವವಾಡುತ್ತವೆ. ನಾವು ಸಂತೋಷವಾಗಿ ಬದುಕಿ, ಬಾಳಿ ಏನಾದರೂ ಒಂದನ್ನು ಸಾಧಿಸಬೇಕೆಂದರೆ ನಮ್ಮಲ್ಲಿ ಒಳ್ಳೆಯ ಗುಣಗಳ ಜೊತೆಗೆ ಕೆಲವು ಕೆಟ್ಟ ಗುಣಗಳು ಇರಬೇಕು. ವಾಸ್ತವಿಕವಾಗಿ ಈ ಕೆಟ್ಟ ಗುಣಗಳು ಖಂಡಿತ ಕೆಟ್ಟ ಗುಣಗಳಲ್ಲ. ನಮ್ಮಲ್ಲಿನ ಕೆಲವು ಢೋಂಗಿ ಬಾಬಾಗಳು ತಾವು ಬದುಕುವುದಕ್ಕೆ ಭಾಷಣ ಬಿಗಿಯುವಾಗ ಈ ಗುಣಗಳನ್ನು ದುರ್ಗುಣಗಳೇಂದು ಸಾರಿದ್ದಾರೆ. ಅದಕ್ಕಾಗಿ ಈ ಗುಣಗಳನ್ನು ಮುದುಕರು ದ್ವೇಷಿಸುತ್ತಾರೆ. ಆದರೆ ಯುವಕರು ಈ ಗುಣಗಳನ್ನು ದ್ವೇಷಿಸಬಾರದು. ಯಾಕೆಂದರೆ ಯುವಕರಿಗೆ ಎಲ್ಲವೂ ಸಾಧ್ಯವಿದೆ…
ಇರಲೇಬೇಕಾದ ಕೆಲವು ದುರ್ಗುಣಗಳು ಇಂತಿವೆ ;
೧) ಮನುಷ್ಯನಿಗೆ ಆಸೆ ಇರಬೇಕು. ದು:ಖವಾದರೂ ಪರವಾಗಿಲ್ಲ, ಕ್ವಿಂಟಾಲಗಟ್ಟಲೇ ಆಸೆಪಡಿ. ಆ ಆಸೆಗಳಿಗಾಗಿ ಹಗಲಿರುಳು ಕಷ್ಟಾಪಡಿ. ಯಾಕೆಂದರೆ ಕಲಿಯೋ ಆಸೆ ಪಡದೇ ಹೋಗಿದ್ರೆ ರನ್ನ ಕವಿ ಚಕ್ರವರ್ತಿ ಆಗುತ್ತಿರಲಿಲ್ಲ. ವಿಜ್ಞಾನಿಗಳಿಗೆ ಸಾಧಿಸೋ ಆಸೆ ಇರದಿದ್ದ್ರೆ ವಿಜ್ಞಾನ ತಂತ್ರಜ್ಞಾನ ಮುಗಿಲೆತ್ತರಕ್ಕೆ ಬೆಳೆಯುತ್ತಿರಲಿಲ್ಲ. ಮಿಂಚೋ ಆಸೆ ಇರದಿದ್ದರೆ ಯಾವನೂ ಫಿಲ್ಮ್ ಸ್ಟಾರ ಆಗುತ್ತಿರಲಿಲ್ಲ. ಆಡೋ ಆಸೆ ಇರದಿದ್ದರೆ ರಾಹುಲ ದ್ರಾವಿಡ ‘ಕ್ರಿಕೆಟಿನ ಗೋಡೆ (Wall of Cricket)’ ಎಂದು ಕರೆಸಿಕೊಳ್ಳುತ್ತಿರಲಿಲ್ಲ. ಪ್ರೀತ್ಸೋ ಆಸೆಯಿರದಿದ್ದರೆ ಇವತ್ತು ಯಾರಿಗೂ ದೇವದಾಸ ಅನ್ನೋ ಹೆಸರು ಗೊತ್ತಿರುತ್ತಿರಲಿಲ್ಲ. ಬದುಕೋ ಆಸೆ ಇರದಿದ್ದರೆ ಇಷ್ಟೊತ್ತಿಗೆ ಮನುಷ್ಯರಿಲ್ಲದೆ ಭೂಮಿ ಬರಡಾಗಿರುತ್ತಿತ್ತು.
ಚಿಲ್ಲರೆ ವಸ್ತು ಮತ್ತು ವ್ಯಕ್ತಿಗಳಿಗಾಗಿ ಆಸೆಪಡಬೇಡಿ. ಅಮೂಲ್ಯವಾದ ವಸ್ತುಗಳಿಗಾಗಿ ಆಸೆಪಡಿ. ಆಸೆಪಡದೆ ನಿಮಗೆ ಅಂತಸ್ತು ಸಿಗುವುದಿಲ್ಲ. ಆಸೆಪಡುವುದು ಅಪರಾಧವೇನಲ್ಲ. ಈ ಜಗತ್ತಿನಲ್ಲಿ ಯಾರು ನಿಮ್ಮ ಇಷ್ಟಗಳನ್ನು ಈಡೇರಿಸಲು ಕಾಯುತ್ತಾ ಕುಳಿತಿಲ್ಲ. ನಿಮಗೇನು ಬೇಕೋ ಅದನ್ನು ನೀವೇ ಆಸೆಪಟ್ಟು ಕೆಲಸ ಮಾಡಿ ಕಷ್ಟಬಿದ್ದು ಪಡೆದುಕೊಳ್ಳಬೇಕು. ಸಣ್ಣಸಣ್ಣ ಆಸೆಗಳಿಂದಲೇ ದೊಡ್ಡದೊಡ್ಡ ಕನಸುಗಳು ಜನ್ಮತಾಳುತ್ತವೆ. ಕನಸುಗಳು ನನಸಾದಾಗ ನೀವು ಕಂಡಿದ್ದೆಲ್ಲ ನಿಮ್ಮ ಕೈಯಲ್ಲಿರುತ್ತದೆ. ಅದಕ್ಕಾಗಿ ಯಾಕ ತಡ? ಧೈರ್ಯವಾಗಿ ಆಸೆಪಡಿ. ತಕ್ಕ ಪರಿಶ್ರಮವಿಲ್ಲದ ಬೇನಾಮಿ ಆಸೆಗಳು ಮಾತ್ರ ಬೆಟ್ಟದಷ್ಟು ದು:ಖ ತರುತ್ತವೆ. ನಿಯತ್ತಾಗಿರೋ ಆಸೆಗಳು ಯಾವತ್ತು ನಿಮಗೆ ನಿರಾಸೆ ಮಾಡಲ್ಲ.
೨) ಕೆಲವು ವಿಷಯಗಳಲ್ಲಿ ಮನುಷ್ಯ ಕಿವಿಯಿದ್ದು ಕಿವುಡನಾಗಬೇಕು. ಜಗತ್ತಿಗೆ ಬೇರೆಯವರನ್ನು ನಿಂದಿಸುವುದರಲ್ಲಿ ಆಲ್ಕೋಹಾಲ್ ಕುಡಿದಷ್ಟು ಕಿಕ್ಕ್ ಸಿಗುತ್ತದೆ. ಜಗತ್ತು ನಮ್ಮ ಬಗ್ಗೆ ಏನೆಂದುಕೊಳ್ಳುತ್ತದೆ ಎಂಬುದರ ಬಗ್ಗೆ ನಾವು ಕಾಳಜಿ ಮಾಡಬಾರದು. ಮೂರ್ಖ ಜಗತ್ತಿನ ವಿಷಯದಲ್ಲಿ ನಾವು ಕಿವಿಯಿದ್ದು ಕಿವುಡರಾಗಿರಬೇಕು. ಜನ ನಮ್ಮ ಬಗ್ಗೆ ಒಳ್ಳೆಯದನ್ನ ಮಾತಾಡಿದರೆ ನಮ್ಮ ಬ್ಯಾಂಕ ಅಕೌಂಟಿನಲ್ಲಿ ದುಡ್ಡೇನು ಬಂದು ಬೀಳುವುದಿಲ್ಲ. ಅದೇ ಜನ ನಮ್ಮ ಬಗ್ಗೆ ಕೆಟ್ಟದಾಗಿ ಕಮೆಂಟ ಮಾಡಿದರೆ ನಮ್ಮ ದುಡ್ಡೇನು ಹೋಗುವುದಿಲ್ಲ. ಜನರ ಮಾತುಗಳಿಂದ ನಮಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಅದಕ್ಕಾಗಿ ನಿಂದಕರ ವಿಷಯದಲ್ಲಿ ಕಿವುಡಾಗಿದ್ದುಕೊಂಡು ಅವರು ನಿದ್ದೆಗೇಡುವಂಥ ಮಹಾನ್ ಸಾಧನೆಗಳನ್ನು ನಾವು ಮಾಡಿ ತೋರಿಸಿ ಮೆರೆಯಬೇಕು. ಏನಾದರೂ ನಾವು ನಮ್ಮ ಆ್ಯಟಿಟ್ಯುಡನ್ನು ಬಿಟ್ಟು ಕೊಡಬಾರದು. ನಾವು ಒಳ್ಳೆ ಸಂಗತಿಗಳ ಜೊತೆಗೆ ಕೆಲವು ಕೆಟ್ಟ ಸಂಗತಿಗಳನ್ನು ಸಹ ತಿಳಿದುಕೊಳ್ಳಬೇಕು. ಏಕೆಂದರೆ ಒಳ್ಳೆ ಅನುಭವಗಳು ಕೆಟ್ಟ ಅನುಭವಗಳಿಂದ ಮಾತ್ರ ಬರುತ್ತವೆ.
೩) ಮನುಷ್ಯ ಈಗ ಸ್ವಲ್ಪ ಸ್ವಾರ್ಥಿಯಾಗಬೇಕು. ಯಾಕೆಂದರೆ ಈ ಜಗತ್ತು ತುಂಬಾ ಸ್ವಾರ್ಥಿಯಾಗಿದೆ. ಬಿಟ್ಟಿ ಸಲಹೆಗಳನ್ನು ಕೊಡಲು ಸಾವಿರಾರು ಜನ ಸಿಗ್ತಾರೆ. ಆದ್ರೆ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಲು ಬಿಟ್ಟಿ ಸಲಹೆ ಕೊಟ್ಟವರು ಬರುವುದಿಲ್ಲ. ಅದಕ್ಕಾಗಿ ನಾವು ಸ್ವಲ್ಪ ಸ್ವಾರ್ಥಿಗಳಾಗಬೇಕು. ನಮ್ಮ ಅಮೂಲ್ಯವಾದ ಸಮಯವನ್ನು ಸಿಕ್ಕಸಿಕ್ಕವರಿಗಾಗಿ ಪೋಲು ಮಾಡಬಾರದು. ನಮ್ಮ ಸಮಯ ಮತ್ತು ಸಂಪತ್ತನ್ನು ಹೊಗಳು ಭಟ್ಟರಿಗೆ ಕೊಟ್ಟು ಹಾಳು ಮಾಡಬಾರದು. ನಮಗೆ ಸಿಕ್ಕಿರುವ ಸಮಯವನ್ನು ಸರಿಯಾಗಿ ಬಳಸಿಕೊಂಡು ನಾವು ಏನಾದರೂ ಒಂದನ್ನು ಸಾಧಿಸಿ ಶ್ರೀಮಂತರಾಗಬೇಕು. ಮೊದಲು ನಾವು ಸಂತೋಷವಾಗಿರಬೇಕು. ಆನಂತರ ಊರ ಸೇವೆ ಮಾಡಬೇಕು.
ನಮ್ಮ ಮನೆಗೆ ಬೆಂಕಿ ಹಚ್ಚಿ ಊರ ಜನರ ಚಳಿ ಬಿಡಿಸುವ ಮೂರ್ಖತನ ಮಾಡುವ ಅವಶ್ಯಕತೆ ಇಲ್ಲ. ಜಗತ್ತಿಗೆ ಕೆಟ್ಟದನ್ನು ಮಾಡಿದರೆ, ಖಂಡಿತ ಈ ಜಗತ್ತು ನಮಗೆ ಕೆಟ್ಟದನ್ನು ಮಾಡುತ್ತದೆ. ಆದರೆ ನಾವು ಒಳ್ಳೆಯದನ್ನು ಮಾಡಿದಾಗ ಈ ಜಗತ್ತು ನಮ್ಮನ್ನು ಅನುಮಾನಿಸುತ್ತದೆ, ಅವಮಾನಿಸುತ್ತದೆ. ಒಳ್ಳೆಯದನ್ನು ಮಾಡಿದವರಿಗೆಲ್ಲ ಒಳ್ಳೆಯದಾಗಿದ್ರೆ ನಮ್ಮ ದೇಶ ಇಷ್ಟೊತ್ತಿಗೆ ಭೂಮಿ ಮೇಲಿನ ಸ್ವರ್ಗವಾಗುತ್ತಿತ್ತು, ಕಾಮುಕರ ಕೀಚಕರ ನರಕವಾಗುತ್ತಿರಲಿಲ್ಲ. ಅದಕ್ಕಾಗಿ ನಾವು ನಮಗಾಗಿ, ನಮ್ಮನ್ನು ನಂಬಿ ಬಂದ ಮಡದಿಗಾಗಿ ಸ್ವಲ್ಪ ಸ್ವಾರ್ಥಿಗಳಾಗಬೇಕು. ಕೆಲ್ಸಕ್ಕೆ ಬಾರದ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಬದಲಾಯಿಸುತ್ತೇನೆಂದು ಬೇಗನೆ ಸಮಾಧಿ ಸೇರಬಾರದು.
೪) ಮನುಷ್ಯನಿಗೆ ಏನಾದರೂ ಒಂದನ್ನು ಸಾಧಿಸಿಯೇ ಸಾಯುತ್ತೇನೆ ಎಂಬ ಹುಚ್ತನವಿರಬೇಕು. ನಿಜವಾಗಿ ಹೇಳಬೇಕೆಂದರೆ ನಾವು ಏನಾದರೂ ಒಂದನ್ನು ಸಾಧಿಸುತ್ತೇವೆ ಎಂದಾಗ, ಹೊಸದನ್ನು ಮಾಡಲು ಹೊರಟಾಗ ಈ ಸಮಾಜ ನಮ್ಮನ್ನು ನೋಡಿ ನಗುತ್ತದೆ. ನಮ್ಮ ಸ್ನೇಹಿತರೇ ನಮ್ಮನ್ನು ಗೇಲಿ ಮಾಡಿಕೊಂಡು ನಗುತ್ತಾರೆ. ಆದರೂ ನಾವು ‘ಸಾಧಿಸಿಯೇ ಸಾಯುತ್ತೇನೆ’ ಎಂಬ ಹುಚ್ತನವನ್ನು ಬಿಡಬಾರದು. ಅವಮಾನವಾದಾಗಲೇ ಸನ್ಮಾನಿಸಿಕೊಳ್ಳಬೇಕು ಎಂಬ ಛಲ ಹುಟ್ಟುತ್ತದೆ. ನಾವು ನಮ್ಮ ಕನಸುಗಳಿಗಾಗಿ ಪೂರ್ತಿ ಹುಚ್ಚನಾದರೂ ತಪ್ಪೇನಿಲ್ಲ. ಏನು ಸಾಧಿಸದೆ ಸಾಮಾನ್ಯ ಬೀದಿನಾಯಿಗಳಂತೆ ಗುರ್ತಿಲ್ಲದೆ ಸಾಯುವುದಕ್ಕಿಂತ ಪ್ರಯತ್ನಿಸಿ ಸಾಯುವುದರಲ್ಲಿ ತಪ್ಪೇನಿಲ್ಲ. ಹೋರಾಡಿ ಸತ್ತವರಿಗೆ ಸ್ವರ್ಗ ಸಿಗುತ್ತೆ ಹೊರತು ಯುದ್ಧಕ್ಕೆ ಹೆದರಿ ಮನೇಲಿ ಮಲಗಿಕೊಂಡವರಿಗಲ್ಲ.
೫) ಮನುಷ್ಯನಲ್ಲಿ ಆತ್ಮಗೌರವದ ಜೊತೆಗೆ ಆತ್ಮಗರ್ವವೂ ಇರಬೇಕು. ಯಾವನೋ ಮುಠ್ಠಾಳ ಏನೋ ಅಂದ ಅಂತಾ ನಾವು ನಮ್ಮನ್ನು ಕೀಳಾಗಿ ಕಾಣಬಾರದು. ನಮ್ಮ ಮೇಲೆ ನಮಗೆ ಹೆಮ್ಮೆ ಇರಲೇಬೇಕು. ಈ ಜಗತ್ತಿನಲ್ಲಿ ಯಾರು ಶ್ರೇಷ್ಟರಲ್ಲ, ಯಾರು ಕನಿಷ್ಟರಲ್ಲ. ಎಲ್ಲರೂ ಹೊಟ್ಟೆ ಬಟ್ಟೆಗಾಗಿ ಹಗಲುರಾತ್ರಿ ಹೋರಾಡುವವರೇ. ಬಾಡಿಗೆ ಮನೆಯಲ್ಲಿದ್ದರೂ ನಮ್ಮ ಮೇಲೆ ನಮಗೆ ಗರ್ವವಿರಬೇಕು. ಜನ ಏನೇ ಅಂದರೂ ನಾವು ನಮ್ಮನ್ನು ಕೀಳಾಕಿ ಕಾಣಿ ಕೊರಗಬಾರದು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಇರೋದ್ರಲ್ಲೆ ಕಾಲುಚಾಚಿ ಒಡ್ಡಾಡುವುದಕ್ಕಿಂತ, ಚೆನ್ನಾಗಿ ದುಡಿದು ಸಾಕಾಗುವಷ್ಟು ದೊಡ್ಡದಾದ ಹಾಸಿಗೆಯಲ್ಲಿ ಕಾಲುಚಾಚಿ ಹಾಯಾಗಿ ಮಲಗುವುದನ್ನು ಕಲಿಯಬೇಕು.
೬) ಪ್ರತಿಯೊಬ್ಬ ಮನುಷ್ಯನಲ್ಲಿ ನಟನಾ ಕೌಶಲ್ಯ, ಪ್ರಶ್ನಿಸುವ ಗುಣ, ಆಲಸಿತನ, ಸಂದರ್ಭಕ್ಕೆ ತಕ್ಕಂತೆ ಸುಳ್ಳೇಳುವ ಸಾಮರ್ಥ್ಯವಿರಲೇಬೇಕು. ಈ ಜಗತ್ತಿನಲ್ಲಿ ಎಲ್ಲರೂ ಕಳ್ಳರೇ. ಯಾರು ಸಜ್ಜನರಲ್ಲ. ಎಲ್ಲರಿಗೂ ಎರಡೆರಡು ಮುಖಗಳಿವೆ. ಪ್ರತಿಯೊಬ್ಬ ಮನುಷ್ಯನಲ್ಲಿ ಒಬ್ಬ ರಾಕ್ಷಸನಿದ್ದಾನೆ. ಅದಕ್ಕಾಗಿ ನಾವು ಜಗತ್ತಿನ ಸಮಾಧಾನಕ್ಕಾಗಿ, ಕೆಲವು ಕಾರಣಗಳಿಗಾಗಿ ನಾಟಕವಾಡಬೇಕು. ಯಾಕೆಂದರೆ ದುರ್ಜನರ ದೋಸ್ತಿಯೂ ಒಳ್ಳೆಯದಲ್ಲ, ದುಶ್ಮಣಿನೂ ಒಳ್ಳೆಯದಲ್ಲ. ನಾವು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನಿಸದೆ ಏನನ್ನೋ ಸುಮ್ಮನೆ ಒಪ್ಪಿಕೊಂಡು ಮೋಸಹೋಗಿ ಕೊರಗಬಾರದು. ನಾವು ಹೇಳುವ ಒಂದು ಸತ್ಯ ಒಂದು ಸುಖಿ ಸಂಸಾರವನ್ನು ಹಾಳು ಮಾಡಬಾರದು. ಅದಕ್ಕಾಗಿ ನಾವು ಸಂದರ್ಭಾನುಸಾರವಾಗಿ ಸುಳ್ಳನ್ನು ಹೇಳುವುದನ್ನು ಕಲಿಯಬೇಕು. ನಮ್ಮಲ್ಲಿ ಸ್ವಲ್ಪ ಆಲಸಿತನವು ಇರಬೇಕು. ಏಕೆಂದರೆ ಜಗತ್ತಿನ ಕಠಿಣ ಕೆಲಸಗಳೆಲ್ಲವು ಆಲಸಿಗಳಿಂದಲೇ ಸಾಧ್ಯವಾಗಿವೆ.
೭) ಜೀವನದಲ್ಲಿ ರಸಿಕತೆಯೂ ಇರಬೇಕು. ರಸಿಕತೆ ಇಲ್ಲದ ಒಂದು ಬಾಳು ಬಾಳೇ? ಏನೋ ಒಂದು ಗೊಡ್ಡು ಗೋಳನ್ನು ಮುಂದಿಟ್ಟುಕೊಂಡು, ಮುಖಕ್ಕೆ ನೂರು ಗಂಟಾಕಿಕೊಂಡು ಇರೋದ್ರಲ್ಲಿ ಯಾವ ಸುಖವಿದೆ?. ರಸಿಕತೆ ಇಲ್ಲದಿದ್ದರೆ, ಜೀವನದ ಪ್ರತಿಯೊಂದು ಕ್ಷಣವನ್ನು ಸುಖವಾಗಿ ಕಳೆಯುವ ಆಸೆಯಿರದಿದ್ದರೆ ಮದುವೆಯಾಗದೆ ಇರಬೇಕು. ಅದನ್ನು ಬಿಟ್ಟು ಬೇಡದ ಮನಸ್ಸಿನಿಂದ ಮದುವೆಯಾಗಿ ಸಂನ್ಯಾಸಿ ಜೀವನವನ್ನು ಸಾಗಿಸಿ ಬೇರೆಯವರ ಬಾಳನ್ನು ನರಕ ಮಾಡುವುದೇಕೆ? ಈ ಸುಳ್ಳು ಸಂನ್ಯಾಸಿಗಳಿಂದಲೇ ಅಕ್ರಮ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಅವಶ್ಯಕತೆ ಇರುವಷ್ಟು ರಸಿಕತೆ ಗಂಡ ಹೆಂಡತಿಯರಲ್ಲಿದ್ದರೆ ಅಕ್ರಮ ಸಂಬಂಧಗಳು ಅಸ್ತಿತ್ವದಲ್ಲೇ ಇರುವುದಿಲ್ಲ. ಅದಕ್ಕಾಗಿ ಊಟಕ್ಕೆ ಉಪ್ಪಿನಕಾಯಿ ಇರುವಂತೆ, ಸಂಕಷ್ಟಗಳಿಂದ ತುಂಬಿರುವ ಸಂಸಾರದಲ್ಲಿ ಸೆಕ್ಸಿತನವು ಇರಲೇಬೇಕು.
ಇಲ್ಲಿರುವ ಎಲ್ಲ ದುರ್ಗುಣಗಳು ನನ್ನ ವೈಯಕ್ತಿಕ ಅನುಭವಗಳು. ಅದಕ್ಕಾಗಿ ಇವುಗಳನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಅನಿಸುತ್ತೆ. ಅಲ್ಲದೆ ಈ ಅಭಿಪ್ರಾಯಗಳು 100% ಸರಿಯಿವೆ ಎಂದು ನಾನು ಪ್ರತಿಪಾದಿಸುವುದಿಲ್ಲ. ಅವರವರ ಜೀವನದ ವಿಚಾರಗಳು ಅವರವರಿಗೆ ಬಿಟ್ಟ ಕರ್ಮಗಳು…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.