1) ಲೋಕದ ಚೇಷ್ಟೇಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೇಗೆ ಮನವೇ ಬೀಜ
ಎನಗುಳ್ಳದೊಂದು ಮನ
ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ
ಏನಗೆ ಭವವುಂಟೇ ಚೆನ್ನಮಲ್ಲಿಕಾರ್ಜುನಯ್ಯ…
2) ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ
ನೆನಹಿಂಗೆ ಆರಿವಾಗಿ ಕಾಡಿತ್ತು ಮಾಯೆ
ಜಗದ ಜಂಗಳಿಗಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನ ನೀನೊಪ್ಪಿದ ಮಾಯೆಯ ಯಾರು ಗೆಲ್ಲಲಾರರು…
3) ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ ಹಳ್ಳ ಭಾವಿಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು…
4) ಕಲ್ಲುಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೆ ಅವ್ವ?
ಉಂಡು ಹಸಿವಾತೆಂದೊಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನಬೆಂದೊಡೆ
ಗಂಡ ಚೆನ್ನಮಲ್ಲಿಕಾರ್ಜುನೆಂತೊಲಿವನಯ್ಯ…
5) ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವ
ಹೊನ್ನು ಮಣ್ಣಿನ ಮಾಯೆಯ ಮಾಣಿಸಿದನವ್ವ
ಎನ್ನ ತನುವಿನ ಲಜ್ಜೆಯನಿಳುಹಿ ಎನ್ನಮನದ
ಕತ್ತಲೆಯ ಕಳೆದ ಚೆನ್ನಮಲ್ಲಿಕಾರ್ಜುನನಯ್ಯನ
ಒಳಗಾದವಳನೇನೆಂದು ನುಡಿಯಿಸುವಿರವ್ವ….
6) ಹಗಲಿನ ಕೂಟಕ್ಕೆ ಹೋರಿಬೆಂಡಾದೆ
ಇರುಳಿನ ಕೂಟಕ್ಕೆ ಇಂಬಂದು ಹತ್ತಿದೆ
ಕನಸಿನಲ್ಲಿ ಮನ ಸಂಗವಾಗಿ
ಮನಸಿನಲ್ಲಿ ಮೈಮರೆದು ಸಂಗವಾಗಿರ್ದೆ
ಚೆನ್ನಮಲ್ಲಿಕಾರ್ಜುನನೊಪ್ಪಚ್ಚಿ ಕೂಡಿ ಕಣ್ತೆರೆದೆನವ್ವ…
7) ಅನ್ನವ ನೀಡುವವರಿಗೆ ಧಾನ್ಯವೇ ಶಿವಲೋಕ
ಅರ್ಥವ ಕೊಡುವವರಿಗೆ ಪಾಷಾಣವೇ ಶಿವಲೋಕ
ಹೆಣ್ಣು ಹೊನ್ನು ಮಣ್ಣು ಮೂರನೂ ಕಣ್ಣಿನಲ್ಲಿ ನೋಡಿ
ಕಿವಿಯಲ್ಲಿ ಕೇಳಿ ಕೈಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತು
ತನ್ನ ನಿತ್ತು ತುಷ್ಟಿವಡೆವರೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ…
8) ನಮಗೆ ನಮ್ಮ ಲಿಂಗದ ಚಿಂತೆ
ನಮಗೆ ನಮ್ಮ ಭಕ್ತರ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ
ಚಿಂತೆಯಲ್ಲದೇ ಲೋಕದ ಮಾತು ನಮಗೇತಕಣ್ಣ…
9) ನೋಡಿ ನುಡಿಸಿ ಮಾತಾಡಿಸಿದಡೊಂದು ಸುಖ
ಏನು ಮಾಡಲಪ್ಪ ನಿಮ್ಮ ಶರಣರನುಭಾವ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ಸದ್ಗೋಷ್ಟಿ ಏನು ಮಾಡಲಯ್ಯ…
10) ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗ ಎನ್ನದಿರು ಚೆನ್ನಮಲ್ಲಿಕಾರ್ಜುನ…
11) ತೆರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ
ತನ್ನ ನೂಲು ತನ್ನ ಸ್ತುತಿಸಾವ ತೆರನಂತೆ
ಮನಬಂದುದ ಬಯಸಿ ಬೇವುತ್ತಿದ್ದೇನೆ
ಅಯ್ಯಾ ಎನ್ನ ಮನದ ದುರಾಸೆಯ ಮಾಣಿಸಿ
ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನ…
12) ಒಮ್ಮೆ ಕಾಮನ ಕಾಲ ಹಿಡಿದೆ
ಒಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ
ಸುಡು ವಿರಹವನು ಅರಿಗೆ ದೃತಿಗೆಡುವೆ
ಚೆನ್ನಮಲ್ಲಿಕಾರ್ಜುನ ದೇವನೇ ನೊಲ್ಲದ ಕಾರಣ
ಎಲ್ಲರಿಗೆ ಹಂಗಿಲೆಯಾದೆನವ್ವ…
13) ಎನ್ನ ಮಾಯದ ಮದವ ಮುರಿಯಯ್ಯ
ಎನ್ನ ಕಾಯದ ಕತ್ತಲೆಯ ಕಳೆಯಯ್ಯ
ಎನ್ನ ಜೀವನದ ಜಂಜಡವ ಮಾಣಿಸಯ್ಯ
ಎನ್ನದೇವ ಚೆನ್ನಮಲ್ಲಿಕಾರ್ಜುನದೇವಯ್ಯ
ಎನ್ನ ಸುತ್ತಿದ ಪ್ರಪಂಚವ ಬಿಡಿಸು ನಿಮ್ಮ ಧರ್ಮ…
14) ಮುಡಿ ಬಿಟ್ಟು ಮೊಗಬಾಡಿ ತನು ಕರಗಿದವಳ
ಎನ್ನನೇಕ ನುಡಿಸುವಿರಿ ಎಲೆ ಅಣ್ಣಗಳಿರಾ
ಎನ್ನನೇಕೆ ಕಾಡುವಿರಿ? ಎಲೆ ತಂದೆಗಳಿರಾ
ಬಲು ಹಳಿದು ಭವಗೆಟ್ಟು ಛಲಗೆಟ್ಟು ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ…
15) ಅಲ್ಲೆಂದೆಡೆ ಉಂಟೆಂಬುದೀ ಮಾಯೆ
ಒಲ್ಲೆನೆಂದಡೆ ಬಿಡದೀ ಮಾಯೆ
ಎನಗಿದು ವಿಧಿಯೇ? ಚೆನ್ನಮಲ್ಲಿಕಾರ್ಜುನ
ಒಪ್ಪಿ ಮರೆವೊಕ್ಕಡೆ ಮತ್ತುಂಟೆ? ಕಾಯಯ್ಯ ಶಿವಧೊ…
16) ಸರ್ಪನ ಬಾಯಿ ಕಪ್ಪೆ ನೊಣಕ್ಕೆ ಹಾರುವಂತೆ
ಅಪ್ಯಾಯನ ಬಿಡದು ಕಾರ್ಯ ವರ್ವಿತನೆಂಬ ಹಸಿವುನೋಡಾ
ನಾನು ಭಕ್ತನೆಂಬ ನಾಚಿಕೆಯ ನೋಡಾ
ನಾನು ಯುಕ್ತನೆಂಬ ಹೇಸಿಕೆಯ ನೋಡಾ
ಓಗರವಿನ್ನಾಗದು ಪ್ರಸಾದ ಮುನ್ನಿಲ್ಲ
ಚೆನ್ನಮಲ್ಲಿಕಾರ್ಜುನ ಉಭಯವಡಗರನ್ನಕ್ಕೆ…
17) ಎನ್ನಂತೆ ಪುಣ್ಯಗೈದವರುಂಟೆ?
ಎನ್ನಂತೆ ಭಾಗ್ಯಂಗೈದವರುಂಟೆ?
ಕಿನ್ನರ ನಂತಪ್ಪ ಸೋದರನೆನಗೆ
ಏಳೇಳು ಜನ್ಮಗಳಲ್ಲಿ ಶಿವಭಕ್ತರೇ ಬಂಧುಗಳೆನಗೆ
ಚೆನ್ನಮಲ್ಲಿಕಾರ್ಜುನಂತಪ್ಪ ಗಂಡನೋಡಾ ಎನಗೆ…
18) ಸಂಗದಿಂದಲ್ಲದೇ ಅಗ್ನಿ ಹುಟ್ಟದು
ಸಂಗದಿಂದಲ್ಲದೇ ಬೀಜ ಮೊಳೆಯದು
ಸಂಗದಿಂದಲ್ಲದೇ ದೇಹವಾಗದು
ಸಂಗದಿಂದಲ್ಲದೇ ಸರ್ವಸುಖ ದೋರದು
ಚೆನ್ನಮಲ್ಲಿಕಾರ್ಜುನ ದೇವಯ್ಯ ನಿಮ್ಮ ಶರಣರ
ಅನುಭವ ಸಂಗದಿಂದ ನಾ ಪರಮ ಸುಖಿಯಾದೆನು…
19) ಊರ ಸೀರೆಗೆ ಅಗಸ ತಡಬಡ ಗೊಂಬಂತೆ
ಹೊನ್ನೆನ್ನದು ಮಣ್ಣೆನ್ನದು ಹೆಣ್ಣೆನ್ನದು
ಎಂದು ಸಿನೆನೆನೆದು ನಿಮ್ಮನರಿಯದ ಕಾರಣ
ಕೆಮ್ಮನೇ ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ…
20) ಎಮ್ಮೆಗೊಂದು ಚಿಂತೆ
ಸಮಗಾರನಿಗೊಂದು ಚಿಂತೆ
ನನಗೆ ನನ್ನ ಚಿಂತೆ
ತನಗೆ ತನ್ನ ಕಾಮದ ಚಿಂತೆ
ಒಲ್ಲೆ ಹೋಗು ಶರಗ ಬಿಡು ಮರಳೆ
ನನಗೆ ಚೆನ್ನಮಲ್ಲಿಕಾರ್ಜುನ ದೇವರು
ಒಲಿವನೋ ಒಲೆಯನೋ ಎಂಬ ಚಿಂತೆ…
21) ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ
ಅಭಿಮಾನವಾಗಿ ಕಾಡಿತ್ತು ನೋಡಾ
ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ
ಅಭಿಮಾನವಾಗಿ ಕಾಡಿತ್ತು ನೋಡಾ
ಲೋಕವೆಂಬ ಮಾಯೆಗೆ ಶರಣಚಾರಿತ್ರ
ಮರುಳಾಗಿ ತೋರುವದು ನೋಡಾ
ಚೆನ್ನಮಲ್ಲಿಕಾರ್ಜುನನೊಲಿದೆ ಶರಣಂಗೆ
ಮಾಯೆಯಿಲ್ಲ ಮರಹಿಲ್ಲ ಅಭಿಮಾನವೂ ಇಲ್ಲ…
22) ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ಬೀಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲುವನಾರೂ ಅರಿಯಬಾರದು…
23) ಸುಖದ ಸುಖಗಳ ಸಂಭಾಷಣೆಯಿಂದ
ದು:ಖಕ್ಕೆ ವಿಶ್ರಾಮವಾಗಿತ್ತು
ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ
ನೆನಹಕ್ಕೆ ವಿಶ್ರಾಮವಾಗಿತ್ತು
ಬೆಚ್ಚು ಬೆರಸಲೊಡನೆ ಮಚ್ಚು ಒಳಗೊಂಡಿತಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ಸಂಗದಿಂದ…
24) ಹಾವಿನ ಬಾಯ ಹಲ್ಲಕಳೆದು ಹಾವನಾಡಿಸಬಲ್ಲದೆ
ಹಾವಿನ ಸಂಗವೇ ಲೇಸು ಕಂಡಯ್ಯ
ಕಾಯದ ಸಂಗವ ವಿವರಿಸಬಲ್ಲದೆ
ಕಾಯದ ಸಂಗವೇ ಲೇಸು ಕಂಡಯ್ಯ
ತಾಯಿ ರಕ್ಕಸಿ ಆದಂತೆ ಕಾಯ ವಿಕಾರವು
ಚೆನ್ನಮಲ್ಲಿಕಾರ್ಜುನಯ್ಯಾ ನೀನೊಲಿದವರು ಕಾಯಗೊಂಡಿದ್ದರೆನಬೇಡ…
25) ಗಗನ ಗುಂಪ ಚಂದ್ರಮ ಬಲ್ಲುದಲ್ಲದೇ
ಮೇಲಿದ್ದಾಡುವ ಹದ್ದು ಬಲ್ಲುದೇ ಅಯ್ಯ?
ನದಿಯ ಗುಂಪ ತಾವರೆ ಬಲ್ಲುದಲ್ಲದೇ
ತಡಿಯಲ್ಲಿದ್ದ ಹೊನ್ನೆವರಿಕೆ ಬಲ್ಲುದೇ ಅಯ್ಯ?
ಪುಷ್ಪದ ಪರಿಮಳದ ದುಂಬಿ ಬಲ್ಲುದಲ್ಲದೇ
ಕಡೆಯಲ್ಲಿದ್ದಾಡುವ ನೊರಜು ಬಲ್ಲುದೇ ಅಯ್ಯ?
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ನಿಲುವ ನೀವೇ ಬಲ್ಲರಲ್ಲದೇ
ಈ ಕೋಣನ ಮೈಯ ಮೇಲಿಣ ಸೊಳ್ಳೆಗಳೆತ್ತ ಬಲ್ಲವಯ್ಯ…?
26) ಕೋಲ ತುದಿಯ ಕೋಡಗದಂತೆ
ನೇಣ ತುದಿಯ ಬೊಂಬೆಯಂತೆ
ಆಡಿದೆನಯ್ಯ ನೀನಾಡಿಸಿದಂತೆ
ನಾನು ನುಡಿದ್ದೆನಯ್ಯ ನೀನುಡಿಸಿದಂತೆ
ನಾನಿದ್ದೆನಯ್ಯ ನೀನಿರಿಸಿದಂತೆ
ಜಗದಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ…
27) ಹರಿಯ ನುಂಗಿತ್ತು ಮಾಯೆ
ಅಜನ ನುಂಗಿತ್ತು ಮಾಯೆ
ಇಂದ್ರನ ನುಂಗಿತ್ತು ಮಾಯೆ
ಚಂದ್ರನ ನುಂಗಿತ್ತು ಮಾಯೆ
ಬಲ್ಲೆನೆಂಬ ಬಲಗೈಯ್ಯರನುಂಗಿತ್ತು ಮಾಯೆ
ಈರೇಳು ಭುವನವಾರಡಿಗೊಂಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನಯ್ಯ ಎನ್ನ ಮಾಯೆಯ ಮಾಣಿಸು ಕರುಣ…
28) ಬಿಟ್ಟೇನೆಂದರೆ ಬಿಡದಿ ಮಾಯೆ
ಬಿಡದಿದ್ದರೆ ಬೆಂಬತ್ತಿತು ಮಾಯೆ
ಯೋಗಿಗೆ ಯೋಗಿಣಿಯಾಗಿತ್ತು ಮಾಯೆ
ಸವಣಿಗೆ ಸವಣಿಯಾಗಿತ್ತು ಮಾಯೆ
ಯತಿಗೆ ಪದಾಶಿಯಾಗಿತ್ತು ಮಾಯೆ
ನಿನ್ನ ಮಾಯೆಗೆ ನಾನಂಜುವಳಲ್ಲ
ಚೆನ್ನಮಲ್ಲಿಕಾರ್ಜುನ ದೇವಾ ನಿಮ್ಮಾಣೆ…
29) ಬಂಜೆ ಬೇನೆಯ ನರಿವಳೇ?
ಬಲದಾಯಿ ಮುದ್ದಬಲ್ಲಳೇ?
ನೊಂದ ನೋವ ನೋವರಿಯದವರೆತ್ತ ಬಲ್ಲರು?
ಚೆನ್ನಮಲ್ಲಿಕಾರ್ಜುನ ನಿರಿದಗಲು ಬಡಲಲ್ಲಿ ಮುರಿದು
ಹೊರಳುವನ್ನೆಳಲನು ನೀವೆತ್ತ ಬಲ್ಲರೇ ಎಲೆ ತಾಯಿಗಳಿರಾ….
30) ಹರನೆ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಿಸಿದ್ದೆ ನೋಡಾ
ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದರೆ
ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು
ಭಸ್ಮವನೆ ಪೂಸಿ ಕಂಕಣವನೆ ಕಟ್ಟಿದರು
ಚೆನ್ನಮಲ್ಲಿಕಾರ್ಜುನ ತನಗೆ ತಾನಾಗಿರಬೇಕೆಂದು…
31) ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯ?
ಕ್ಷಮೆ ದಯೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯ?
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ
ಚೆನ್ನಮಲ್ಲಿಕಾರ್ಜುನ…?
32) ಬೆಟ್ಟದಾ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೇನಯ್ಯ?
ಸಮುದ್ರದಾ ತಡಿಯಲೊಂದು ಮನೆಯ ಮಾಡಿ
ನೊರೆ ತೆರೆಗಳಿಗಂಜಿದೊಡೇನಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ
ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು
ಬಂದರೆ ಮನದಲ್ಲಿ ಕೋಪವ ತಾಳದೇ
ಸಮಾಧಾನಿಯಾಗಿರಬೇಕು…
33) ವೇದಶಾಸ್ತ್ರ ಪುರಾಣಾಗಮಂಗಳೆಲ್ಲ
ಕೊಟ್ಟುತ್ತ ಕುಟ್ಟುತ್ತ ನುಚ್ಚ ತೌಡು ಕಾಣಿಭೋ
ಇವ ಕುಟ್ಟಬೇಕೆ? ಅತ್ತಲಿತ್ತ ಹರಿವ ಮನವ
ಶಿರವನರಿದಡೆ ಬಟ್ಟಬರಿಯ ಬಯಲು ಚೆನ್ನಮಲ್ಲಿಕಾರ್ಜುನ…
34) ಚಿನ್ನದ ಸಂಕೋಲೆಯಾದಡೇನು? ಬಂಧನವಲ್ಲದೇ?
ಮುತ್ತಿನ ಬಲೆಯಾದೊಡೇನು? ತೊಡರಲ್ಲವೇ?
ನೆಚ್ಚ ಮೆಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವದೇ ಚೆನ್ನಮಲ್ಲಿಕಾರ್ಜುನ…
35) ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು
ಒಬ್ಬಂಗೆ ಇಹಪರವೆರಡೂ ಇಲ್ಲ
ಚೆನ್ನಮಲ್ಲಿಕಾರ್ಜುನ ದೇವರ ಶರಣರಿಗೆ ಇಹಪಹವೆರಡೂ ಉಂಟು…
36) ನರ ಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ
ಭವ ಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೇ
ಭವಿ ಎಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೇ
ಚೆನ್ನಮಲ್ಲಿಕಾರ್ಜುನನ ತಂದೆನ್ನ ವಶಕ್ಕೆ
ಕೊಟ್ಟ ಗುರುವೇ ನಮೋ ನಮೋ
37) ಇಳಿನಿಂಬೆ ಮಾವು ಮಾದಳಕ್ಕೆ
ಹುಳಿ ನೀರನೆರದವರಾರಯ್ಯ?
ಕಬ್ಬು ಬಾಳೆ ನಾರಿವಾಳಕ್ಕೆ ಸಿಹಿ ನೀರ ನೆರೆದವರಾರಯ್ಯ?
ಕಳೆದ ಶಾಲಿಗೆ ಓಗರದ ಉದಕವ ನೆರದವರಾರಯ್ಯ?
ಮರುಗಮಲ್ಲಿಗೆ ಪಚ್ಚೆಮುಡಿವಾಳಕ್ಕೆ
ಪರಿಮಳದುದಕವ ನೆರೆದವರಾರಯ್ಯ ?
ಇಂತೀ ಜಲವೊಂದೇ ನೆಲವಂದೇ ಆಕಾಶವಂದೇ
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿಬೇರಾಗಿಹ ಹಾಗೆ
ಎನ್ನ ದೇವ ಮಲ್ಲಿಕಾರ್ಜುನನಯ್ಯನು
ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ…
38) ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ?
ಧನವಿದ್ದು ಫಲವೇನು ದಯೆವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು ಮನವಿಲ್ಲದನ್ನಕ್ಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ? ಚೆನ್ನಮಲ್ಲಿಕಾರ್ಜುನ…
39) ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು
ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು
ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ
ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನ…
40) ಚಂದನದ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣದ ಕಡಿದೊರೆರೊಡೆ
ಬೆಂದು ಕಳಂಕ ಹಿಡಿದಿತ್ತೆ?
ಸಂದು ಸಂದನು ಕಡಿದು ಕಬ್ಬನು
ತಂದು ಗಾಣದಲ್ಲಿಕ್ಕೇರಿದಡೆ
ಬೆಂದು ಪಾಕಗೊಳೆ ಸಕ್ಕರೆಯಾಗಿ
ನೊಂದೆನೆಂದು ಸವಿಯ ಬಿಟ್ಟಿತ್ತೇ?
ನಾ ಹಿಂದೆ ಮಾಡಿದ ಹೀನಂಗಳೆಲ್ಲದ ತಂದು
ಮುಂದಿಳುಹಲು ನಿಮಗೆ ಹಾನಿ ಎನ್ನತಂದೆ
ಚೆನ್ನಮಲ್ಲಿಕಾರ್ಜುನ ದೇವಯ್ಯ
ಕೊಂದೊಡೆ ಶರಣೆಂಬುದ ಮಾಣೆ…
41) ತುಂಬಿದುದು ತುಳುಕದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಒಳಿದುದು ಓಸರಿಸದು ನೋಡಾ
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದ ಶರಣಂಗೆ
ನಿಸ್ಸೀಮ ಸುಖ ನೋಡಯ್ಯ…
42) ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ
ಮೊದಲಿಲ್ಲದ ಸೂತಕ್ಕೆ ಮರಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ
ಗುರುವಂಗೆ ಜಗವೆಲ್ಲಾ ಹೆಣ್ಣು ನೋಡಾ…
43) ಪಂಚೇಂದ್ರಿಯದೊಳಗೆ ಒಂದಕ್ಕೆ ಪ್ರಿಯವಾದರೆ ಸಾಲದೇ?
ಸಪ್ತವ್ಯಸಂಗಳೊಳಗೆ ಒಂದಕ್ಕೆ ಪ್ರಿಯವಾದರೆ ಸಾಲದೇ?
ರತ್ನದ ಸಂಕಲೆಯಾದರೇನು ? ಬಂಧನ ಬಿಡುವದೇ? ಚೆನ್ನಮಲ್ಲಿಕಾರ್ಜುನ…
44) ಕೂಡಿ ಕೂಡುವ ಸುಖದಿಂದ
ಒಪ್ಪಿಚ್ಚಿ ಆಗಲಿ ಕೂಡುವ ಸುಖಲೇಸು ಕೆಳದಿ
ಬಚ್ರತ ಆಗಲಿರೆ ಕಾಣದೇ ಇರಲಾರೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನನಗಲಿ
ಅಗಲದ ಸುಖವೆಂದಪ್ಪುದೇ…
45) ಹಂದಿಯು ಮದಕರಿಯು ಒಂದೇ ದಾರಿಯಲ್ಲಿ
ಸಂಧಿಸಿದರೆ ಹಂದಿಗಂಜಿ ಮದಕರಿ ಕೆಳಗೆ ಸರಿದರೆ
ಈ ಹಂದಿಯು ಕೇಸರಿಯಪ್ಪುದೇ ಚೆನ್ನಮಲ್ಲಿಕಾರ್ಜುನ…
46) ಕೆಂಡದ ಶವದಂತೆ ಸೂತ್ರ ತಪ್ಪಿದ ಬೊಂಬೆಯಂತೆ
ಜಲವಿರದ ತಟಾಕದಂತೆ ಬೆಂದನುಲಿಯಂತೆ
ಮತ್ತೆ ಹಿಂದಣ ಉಂಟೇ ಅಣ್ಣ?
ಚೆನ್ನಮಲ್ಲಿಕಾರ್ಜುನ ಸಂಗವೇ ಆಶ್ರಯವಾದವಳಿಗೆ…
47) ಕಟ್ಟಿದ ಕೆರೆಗೆ ಕೋಡಿ ಮಾಣದು
ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯ
ಆರು ಹಿರಿಯರೆಲ್ಲಾ ವೃಥಾ ಕೆಟ್ಟು ಹೋದರಿನ್ನಂತಯ್ಯ
ಚೆನ್ನಮಲ್ಲಿಕಾರ್ಜುನ ದೇವನ ಗೊತ್ತು ಮುಟ್ಟಿದವರೆಲ್ಲರೂ ನಿಶ್ಚಿಂತದಾವರು…
48) ಯೋಗಿಗೆ ಯೋಗಿಣಿಯಾಗಿಹಳು ಮಾಯೆ
ಜೋಗಿಗೆ ಜೋಗಿಣಿಯಾಗಿಹಳು ಮಾಯೆ
ಶ್ರವಣಿಗೆ ಕಂತಿಯಾದಳು ಮಾಯೆ
ಯತಿಗೆ ಪರಾರ್ಥವಾದಳು ಮಾಯೆ
ಹೆಣ್ಣಿಗೆ ಗಂಡು ಮಾಯೆ
ಗಂಡಿಗೆ ಹೆಣ್ಣು ಮಾಯೆ
ನಿಮ್ಮ ಮಾಯೆಗೆ ನಾನಂಜುವಳಲ್ಲ ಚೆನ್ನಮಲ್ಲಿಕಾರ್ಜುನ…
49) ಆವ ವಿದ್ಯೆ ಕಲಿತರೇನು? ಸಾವ ವಿದ್ಯೆ ಮಾಣದನ್ನಕ್ಕ
ಆಶನವ ತೊರೆದಡೇನು? ವ್ಯಸನವ ಮರೆದಡೇನು?
ಉಸಿರ ಹಿಡಿದಡೇನು? ಬಸಿರ ಕಟ್ಟಿದರೇನು?
ಚೆನ್ನಮಲ್ಲಿಕಾರ್ಜುನ ದೇವಯ್ಯ ನೆಲದಳವಾರನಾದಡೆ ಕಳ್ಳನೆಲ್ಲ ಆಗುವೆ?
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.